ಮನೆಯೊಳಗೆ ಬಚ್ಚಿಡಲಾಗಿದ್ದ ಖೋಟಾನೋಟುಗಳ ಸಹಿತ ಕೋಟ್ಯಂತರ ರೂಪಾಯಿ ಪತ್ತೆ: ಇಬ್ಬರಿಗಾಗಿ ಶೋಧ

ಕಾಸರಗೋಡು: ಬಾಡಿಗೆ ಮನೆ ಯಲ್ಲಿ ಬಚ್ಚಿಡಲಾಗಿದ್ದ, ಕೇಂದ್ರ ಸರಕಾರ ಇತ್ತೀಚೆಗಷ್ಟೇ ಅಸಿಂಧುಗೊಳಿಸಿರುವ ೨೦೦೦ ರೂ. ಮುಖಬೆಲೆಯ ೭.೨೫ ಕೋಟಿ ರೂ.ಗಳ ಅಸಲಿ ಮತ್ತು ನಕಲಿ ಕರೆನ್ಸಿ ನೋಟುಗಳನ್ನು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ.

ವಶಪಡಿಸಲಾದ ನೋಟುಗಳಲ್ಲಿ ೨೦೦೦ ರೂ. ಮುಖಬೆಲೆಯ ಹಲವು ಖೋಟಾ ನೋಟುಗಳೂ ಒಳಗೊಂಡಿವೆ ಎಂದು ಪರಿಶೀಲನೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸದುರ್ಗಕ್ಕೆ ಸಮೀಪದ ಅಂಬಲತ್ತರ ಪಾರಪ್ಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ಈ ನೋಟುಗಳ ಬೃಹತ್ ದಾಸ್ತಾನು ಪತ್ತೆಯಾಗಿದೆ. ಅಂಬಲತ್ತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಜೀಶ್‌ರ ನೇತೃತ್ವದ ತಂಡ ನಿನ್ನೆ ಸಂಜೆ ಈ ಕಾರ್ಯಾಚರಣೆ ನಡೆಸಿದೆ. ವಿಷಯ ತಿಳಿದ ಬೇಕಲ ಡಿವೈಎಸ್‌ಪಿ ಜಯನ್ ಡೊಮಿನಿಕ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಮನೆಯಲ್ಲಿ ಅಕ್ರಮವಾಗಿ ಕರೆನ್ಸಿ ನೋಟುಗಳನ್ನು ಬಚ್ಚಿಟ್ಟಿರುವ ಬಗ್ಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರ ಆಧಾರದಲ್ಲಿ ಅಲ್ಲಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ನೋಟು ಪತ್ತೆಯಾದ ಮನೆ ಪಾರಪ್ಪಳ್ಳಿಯ ಬಾಬುರಾಜ್ ಎಂಬವರ ಮಾಲಕತ್ವದಲ್ಲಿದೆ. ಅದನ್ನು ಮೂಲತಃ ಪಾಣತ್ತೂರು ನಿವಾಸಿ ಹಾಗೂ ಈಗ ಕಲ್ಯೋಟ್‌ನಲ್ಲಿ ವಾಸಿಸುತ್ತಿರುವ ಅಬ್ದುಲ್ ರಜಾಕ್ ಎಂಬಾತ  ಬಾಡಿಗೆಗೆ ಪಡೆದುಕೊಂಡಿದ್ದನು. ಮೂಲತಃ ಕರ್ನಾಟಕದ ಪುತ್ತೂರು ನಿವಾಸಿ ಹಾಗೂ ಕಳೆದ ೭ ವರ್ಷಗಳಿಂದ ಬೇಕಲ ಹದ್ದಾದ್‌ನಗರದಲ್ಲಿ ವಾಸಿಸುತ್ತಿರುವ ಸುಲೈಮಾನ್ ಎಂಬಾತನ ಏಜೆಂಟ್ ಆಗಿದ್ದಾನೆ ಅಬ್ದುಲ್ ರಜಾಕ್. ಸುಲೈಮಾನ್‌ಗೆ ಬೇಕಾಗಿ ಈತ ಕಾರ್ಯವೆಸಗುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆ ಬಾಡಿಗೆ ಮನೆಗೆ  ಪೊಲೀಸರು ನಿನ್ನೆ ನಡೆಸಿದ ದಾಳಿಯಲ್ಲಿ ಮೊದಲು ಆ ಮನೆಯ ಹಾಲ್‌ನಲ್ಲಿ ನೋಟುಗಳು ಪತ್ತೆಯಾಗಿತ್ತು. ನಂತರ ಪೊಲೀಸರು  ಮನೆಯಿಡೀ ಜಾಲಾಡಿದಾಗ ದೇವರಕೋಣೆಯಲ್ಲಿ ಗೋಣಿಚೀಲಗಳಲ್ಲಿ ಕಟ್ಟಿ ಬಚ್ಚಿಡಲಾಗಿದ್ದ  ನೋಟುಗಳ ರಾಶಿ ಪತ್ತೆಯಾಗಿದೆ. ಇವುಗಳೆಲ್ಲವೂ ೨೦೦೦ ರೂ. ಮುಖಬೆಲೆಯ ನೋಟುಗಳಾಗಿವೆ. ಬಳಿಕ ಪೊಲೀಸರು ಅದನ್ನು ಅಂಬಲತ್ತರ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ. ತಲಾ ೧೦೦ ನೋಟುಗಳ ಕಟ್ಟುಗಳ ರೂಪದಲ್ಲಿ ಈ ಹಣ ಕಟ್ಟಿರಿಸಲಾಗಿದೆ. ಅದರಲ್ಲಿ ಕೆಲವು ಕಟ್ಟುಗಳಲ್ಲಿ ೧೦೦ಕ್ಕಿಂತ ಕಡಿಮೆ ನೋಟುಗಳಿದ್ದವು. ನೋಟು ಎಣಿಸುವ ಯಂತ್ರಗಳ ಮೂಲಕ ನೋಟುಗಳ ಎಣಿಕೆ ಆರಂಭಿಸಿದಾಗ ಅದರಲ್ಲಿ ೭.೨೫ ಕೋಟಿ ರೂ. ಒಳಗೊಂಡಿರುವುದಾಗಿ ಲೆಕ್ಕ ಹಾಕಲಾಗಿದೆ. ನೋಟುಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿ ದಾಗ ಅದರಲ್ಲಿ ಖೋಟಾನೋಟುಗಳೂ ಇರುವುದನ್ನು ಪತ್ತೆಹಚ್ಚಲಾಗಿದೆ. ಅದರಿಂದಾಗಿ ಅಸಲಿ ಮತ್ತು ನಕಲಿ ನೋಟು ಯಾವುದೆಂಬುದನ್ನು ಬೇರ್ಪಡಿಸಲು ಆ ನೋಟುಗಳನ್ನೆಲ್ಲಾ ಪೊಲೀಸರು ಇಂದು ಬೆಳಿಗ್ಗಿನಿಂದ ಮತ್ತೆ ಎಣಿಸಿ ಪ್ರತ್ಯೇಕಗೊಳಿಸುವ ಕೆಲಸ ಆರಂಭಿಸಿದ್ದಾರೆ. ನೋಟುಗಳನ್ನು ಎಣಿಸಿ ಬೇಸತ್ತುಬೀಳುವ ಸ್ಥಿತಿಯೂ ಪೊಲೀಸರಿಗೆ ಉಂಟಾಗಿದೆ.

ಹೀಗೆ ಪತ್ತೆಯಾದ ನೋಟುಗಳಲ್ಲಿ ಖೋಟಾ ನೋಟುಗಳು ಒಳಗೊಂ ಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಖೋಟಾನೋಟು ತನಿಖೆ ನಡೆಸುವ ‘ಕೌಂಟರ್ ಫೀಟ್’ ವಿಭಾಗಕ್ಕೆ ಹಸ್ತಾಂತರಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಕೌಂಟರ್ ಫೀಟ್ ವಿಭಾಗದವರೂ ಈ ಬಗ್ಗೆ ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖೋಟಾ ನೋಟು ಪತ್ತೆಯಾದ ಬೆನ್ನಲ್ಲೇ ಸುಲೈಮಾನ್ ಮತ್ತು ಮನೆಯನ್ನು ಬಾಡಿಗೆಗೆ ಪಡೆದ ಅಬ್ದುಲ್ ರಜಾಕ್ ನಿನ್ನೆಯಿಂದ ದಿಢೀರ್ ಅಪ್ರತ್ಯಕ್ಷಗೊಂ ಡಿದ್ದಾರೆ. ಮೊಬೈಲ್ ಫೋನ್ ಮೂಲಕ ಪೊಲೀಸರು ಅವರನ್ನು ಸಂಪರ್ಕಿಸಲೆತ್ನಿ ಸಿದರೂ ಫೋನ್‌ಗಳು ಸ್ವಿಚ್ ಆಫ್ ಗೊಂಡ ಸ್ಥಿತಿಯಲ್ಲಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಅಸಿಂಧುಗೊಳಿಸಿದ ಪರಿಣಾಮ ಈಗ ಚಲಾವಣೆಯಲ್ಲಿಲ್ಲ ದಿರುವ ೨೦೦೦ ರೂ. ಮುಖಬೆಲೆಯ ಅಸಲಿ ಮತ್ತು ನಕಲಿ ನೋಟುಗಳನ್ನು  ಆ ಮನೆಯಲ್ಲಿ ಯಾಕಾಗಿ  ಬಚ್ಚಿಡಲಾ ಗಿದೆ ಎಂಬುದನ್ನು ಇನ್ನಷ್ಟೇ ತಿಳಿಯ ಬೇಕಾಗಿದೆ. ಅದನ್ನು ತಂದಿರಿಸಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ವಿಚಾರಣೆಗೊಳ ಪಡಿಸಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page