ಮನೆ ಮುಂದೆ ಪಟಾಕಿ ಸಿಡಿಸಿದ್ದನ್ನು ಪ್ರಶ್ನಿಸಿದ ತಂದೆ, ಮಗ ಸೇರಿ ನಾಲ್ವರಿಗೆ ಇರಿತ: 10 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು
ಕಾಸರಗೋಡು: ಮನೆ ಮುಂದೆ ಪಟಾಕಿ ಸಿಡಿಸುವುದನ್ನು ಪ್ರಶ್ನಿಸಿದ ದ್ವೇಷದಿಂದ ತಂದೆ ಮತ್ತು ಮಗ ಸೇರಿದಂತೆ ನಾಲ್ವರನ್ನು ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ಚೆಂಗಳ ಸಮೀಪದ ೪ನೇ ಮೈಲಿನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚೆಂಗಳ ಸಿಟಿಸನ್ ನಗರದ ಇಬ್ರಾಹಿಂ ಸೈನುದ್ದೀನ್ (42), ಅವರ ಪುತ್ರ ಫವಾಸ್ (20), ಇವರ ಸ್ನೇಹಿತರಾದ ತೈವಳಪ್‌ನ ರಝಾಕ್ (50) ಹಾಗೂ ಸಿಟಿಸನ್ ನಗರದ ಮುನ್ಶೀದ್ ಪಿ.ಎ. (28) ಎಂಬವರು ಈ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಫವಾಸ್‌ನನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ಉಳಿದವರನ್ನು ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಗಾಯಾಳು ಇಬ್ರಾಹಿಂ ಸೈನುದ್ದೀನ್ ನೀಡಿದ ದೂರಿನಂತೆ ಅಬ್ದುಲ್ ಖಾದರ್, ಮೊಯ್ದೀನ್, ನಫೀನ್ ಸೇರಿದಂತೆ 10 ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ 7.30ಕ್ಕೆ ಈ ಘಟನೆ ನಡೆದಿದೆ. ತಮ್ಮ ಮನೆ ಮುಂದೆ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಅದನ್ನು ಪ್ರಶ್ನಿಸಿದ ದ್ವೇಷದಿಂದ ಆ ತಂಡದವರು ಚಾಕು, ತಲ್ವಾರ್ ಇತ್ಯಾದಿ ಮಾರಕಾ ಯುಧಗಳೊಂದಿಗೆ ತನಗೆ ಇರಿದರೆಂದೂ, ಅದನ್ನು ತಡೆಯಲೆತ್ನಿಸಿದ ತನ್ನ ಪುತ್ರ ಹಾಗೂ ಸ್ನೇಹಿತರ ವಿರುದ್ಧವೂ ಆ ತಂಡ ದಾಳಿ ನಡೆಸಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಇಬ್ರಾಹಿಂ ಸೈನುದ್ದೀನ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಆರೋಪಿಗಳಾದ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.