ಮರದ ಬುಡದಲ್ಲಿ ಯುವಕ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಉನ್ನತ ಮಟ್ಟದ ತನಿಖೆ ಆರಂಭ
ಬೋವಿಕ್ಕಾನ: ಯುವಕ ಮನೆ ಬಳಿಯ ಮರದ ಅಡಿ ಭಾಗದಲ್ಲಿ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಯಾದ ಘಟನೆ ನಡೆದಿದೆ. ಮುಳಿಯಾರು ಮೂಲಡ್ಕ ಕಾವುಪಾಡಿ ನಿವಾಸಿ ಎಡನೀರು ಅಬ್ದುಲ್ಲ ಎಂಬವರ ಪುತ್ರ ರಾಶೀದ್ (24) ಸಾವನ್ನಪ್ಪಿದ ಯುವಕ.
ಮೂಲಡ್ಕ ಪುಳಕ್ಕರ ರಸ್ತೆ ಸಮೀಪದ ಮರದ ಬುಡದಲ್ಲಿ ಕುಳಿತ ಸ್ಥಿತಿಯಲ್ಲಿ ರಾಶೀದ್‌ರ ಮೃತದೇಹ ಪತ್ತೆಯಾಗಿದೆ. ಅವರ ಕಾಲಿನಲ್ಲಿ ರಕ್ತ ಒಸರುತ್ತಿತ್ತು. ಮನೆಯಿಂದ ಸುಮಾರು ನೂರು ಮೀಟರ್ ದೂರದಲ್ಲಿರುವ ಶೆಡ್‌ನಲ್ಲಿ ರಾಶೀದ್ ವಾಸಿಸುತ್ತಿದ್ದರು. ತಾಯಿ ಆಯಿಷಾಬಿ ನಿನ್ನೆ ಬೆಳಿಗ್ಗೆ ಚಹದೊಂದಿಗೆ ಆ ಶೆಡ್ಡಿಗೆ ತೆರಳಿದ್ದರು. ಆಗ ರಾಶೀದ್ ಅಲ್ಲಿರಲಿಲ್ಲ. ಆದ್ದರಿಂದ ಅವರು ಚಹಾವನ್ನು ಅಲ್ಲೇ ಇರಿಸಿ ಮರಳಿದ್ದರು. ನಂತರ ಮೊಬೈಲ್ ಫೋನಿನಲ್ಲಿ ಅವರು ರಾಶೀದ್‌ರನ್ನು ಸಂಪರ್ಕಿಸಲೆತ್ನಿಸಿದ್ದರೂ ಫೋನ್ ಸ್ವಿಚ್‌ಆಫ್ ಸ್ಥಿತಿಯಲ್ಲಿತ್ತು. ಇದರಿಂದ ಶಂಕೆಗೊಂಡ ತಾಯಿ ಮತ್ತು ರಾಶೀದ್‌ನ ಸ್ನೇಹಿತ ಅಸ್ಕರ್ ಹುಡುಕಾಟ ಆರಂಭಿಸಿದಾಗ ಆ ಶೆಡ್‌ನಿಂದ ಸುಮಾರು ೫೦ ಮೀಟರ್ ದೂರದ ಮರದ ಬುಡದಲ್ಲಿ ಕುಳಿತು ಸಾವನ್ನಪ್ಪಿದ ಸ್ಥಿತಿಯಲ್ಲಿ ರಾಶೀದ್ ಪತ್ತೆಯಾಗಿದ್ದಾರೆ. ಮೃತ ರಾಶೀದ್ ಬೆಂಗಳೂರಿ ನಲ್ಲಿರುವ ಸಹೋದರನ ಹೊಟೇಲ್‌ನಲ್ಲಿ ಸಹಾಯ ಕನಾಗಿ ದುಡಿಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಅವರು ಊರಿಗೆ ಮರಳಿದ್ದರು. ಬೆಂಗಳೂರಿಗೆ ಮತ್ತೆ ಹಿಂತಿರುಗುವ ಸಿದ್ಧತೆಯಲ್ಲಿದ್ದರೆನ್ನಲಾಗಿದೆ. ಈ ಮಧ್ಯೆ ಅವರು ನಿನ್ನೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಡಿವೈಎಸ್‌ಪಿ ವಿ.ವಿ. ಮನೋಜ್, ಆದೂರು ಪೊಲೀಸ್ ಇನ್ಸ್‌ಪೆಸ್ಟರ್ ಕೆ. ಸುನು ಮೋನ್ ಎಸ್.ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರೂ ತಲುಪಿ ಘಟನೆ ನಡೆದ ಸ್ಥಳದಿಂದ ಅಗತ್ಯದ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಇಂದು ಬೆಳಿಗ್ಗೆ ತನಕ ಪೊಲೀಸರ ಕಾವಲಿನಲ್ಲಿ ಅಲ್ಲೇ ಇರಿಸಲಾಯಿತು.
ಇದೇ ವೇಳೆ ಯುವಕನ ಸಾವಿನ ಬಗ್ಗೆ ಸಂಶಯವಿದೆ ಎಂದು ತಾಯಿ ತಿಳಿ ಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹ ವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಹೆತ್ತವರ ಹೊರತಾಗಿ ಸಹೋದರ ಸಹೋದರಿಯರಾದ ರಜಿನಾಸ್, ಇರ್ಷಾದ್, ಸಾಬೀರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.