ಮಲಗಿದ್ದಾಗ ಸೀಲಿಂಗ್ ಫ್ಯಾನ್ ಬಿದ್ದು ಮನೆಯೊಡೆಯ ಮೃತ್ಯು
ಹೊಸದುರ್ಗ: ಮಲಗುವ ಕೊಠಡಿಯ ಸೀಲಿಂಗ್ ಫ್ಯಾನ್ ಸ್ಲ್ಯಾಬ್‌ನ ಸಿಮೆಂಟ್ ಸಹಿತ ಬಿದ್ದು ಮನೆ ಮಾಲಕ ಮೃತಪಟ್ಟರು. ಊಟ ಮಾಡಿ ಮಧ್ಯಾಹ್ನ ನಿದ್ರಿಸುತ್ತಿದ್ದ ವೇಳೆ ಅಪಾಯ ಸಂಭವಿಸಿದೆ. ಪಯ್ಯನ್ನೂರು ಎಟ್ಟಿಕುಳಂ ಅಂಬಲಪ್ಪಾರ ಆಯಿಷ ಮಂಜಿಲ್‌ನ ಎ.ಕೆ. ಮುಹಮ್ಮದ್ ಶಮೀರ್ (48) ಮೃತಪಟ್ಟವರು. ಎದೆಯ ಕೆಳಭಾಗಕ್ಕೆ ಫ್ಯಾನ್ ಕಳಚಿ ಬಿದ್ದಿದೆ.
ಈ ವೇಳೆ ಪತ್ನಿ ಹಾಗೂ ಮಕ್ಕಳು ಸಮವಸ್ತ್ರ ಖರೀದಿಗೆಂದು ಶಾಲೆಗೆ ತೆರಳಿದ್ದರು. ಫ್ಯಾನ್ ಬಿದ್ದ ಕೂಡಲೇ ಎದ್ದು ಕೆಲಸದವರಿಂದ ಕೊಠಡಿಯೆಲ್ಲ ಶುಚೀಕರಿಸಿದ ಮುಹಮ್ಮದ್ ಪತ್ನಿ ಹಿಂತಿರುಗಿದಾಗ ವಿಷಯ ತಿಳಿಸಿದ್ದು, ಆದರೆ ತನಗೆ ತೊಂದರೆ ಇಲ್ಲವೆಂದು ತಿಳಿಸಿದ್ದರು. ಆದರೆ ಅಲ್ಪ ಹೊತ್ತು ಕಳೆದಾಗ ನೋವು ಹೆಚ್ಚಾಯಿತು. ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜಿಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಪೋಲಿಶ್ ಕಾರ್ಮಿಕನಾಗಿದ್ದಾರೆ ಮೃತಪಟ್ಟ ಶಮೀರ್. ಮೃತರು ಪತ್ನಿ ಶಾನಿಬ, ಮಗಳು ಶಾನಿನ, ಸಹೋದರ ಫೈಸಲ್, ಸಹೋದರಿ ಸರೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.