ಮಲಪ್ಪುರಂನಲ್ಲಿ ಯುವತಿಯನ್ನು ತೋಡಿನ ನೀರಿನಲ್ಲಿ ಮುಳುಗಿಸಿ ಕೊಲೆ : ಆರೋಪಿ ಕಾಸರಗೋಡಿನಲ್ಲೂ ಅಪರಾಧ ಕೃತ್ಯಗಳಲ್ಲಿ ಶಾಮೀಲು ಶಂಕೆ
ಕಾಸರಗೋಡು: ಮಲಪ್ಪುರಂ ನಲ್ಲಿ ಯುವತಿಯನ್ನು ಉಪಾಯ ದಿಂದ ಬೈಕ್ನಲ್ಲಿ ಕರೆದೊಯ್ದು ಬಳಿಕ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಕಾಸರಗೋಡಿನಲ್ಲಿ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆಯೇ ಎಂಬ ಬಗ್ಗೆ ತಿಳಿಯಲು ಪೊಲೀಸರು ತನಿಖ ತೀವ್ರಗೊಳಿಸಿದ್ದಾರೆ. ಮಲಪ್ಪುರಂ ಕೊಂಡೋಟಿ ಚೆರುಪರಂಬ್ ಕಾಲನಿಯ ನಂಬಿಲತ್ತ್ ಮುಜೀಬ್ ರಹ್ಮಾನ್ (೪೯) ಎಂಬಾತ ಕಾಸರಗೋಡಿನಲ್ಲೂ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರಬಹುದೇ ಎಂದು ಸಂಶಯಿಸಲಾಗಿದೆ.ರಾಜ್ಯದ ವಿವಿಧ ಭಾಗಗಳಲ್ಲಾಗಿ ೬೦ಕ್ಕೂ ಹೆಚ್ಚು ಪ್ರಕರಣದಲ್ಲಿ ಮುಜೀಬ್ ರಹ್ಮಾನ್ ಆರೋಪಿ ಯಾಗಿದ್ದಾನೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ.
ವಾಳೂರು ಕುರುಂಕುಡಿ ನಿವಾಸಿ ವಾಸು ಎಂಬವರ ಪುತ್ರಿ ಅಂಬಿಕ ಯಾನೆ ಅನು (೨೬) ಎಂಬಾಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಮುಜೀಬ್ ರಹ್ಮಾನ್ ಆರೋಪಿಯಾಗಿದ್ದಾನೆ.
ಅನುವನ್ನು ಉಪಾಯದಿಂದ ಬೈಕ್ಗೆ ಹತ್ತಿಸಿ ಕರೆದೊಯ್ದು ತೋಡಿನ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ: ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅನು ಮನೆಯಿಂದ ಹೊರಟಿದ್ದಳು. ಮುಂದಿನ ಜಂಕ್ಷನ್ನಲ್ಲಿ ಕಾದು ನಿಂತಿರುವ ಪತಿಯ ಬಳಿಗೆ ತೆರಳಲು ಅನು ವಾಹನಕ್ಕಾಗಿ ಕಾದು ನಿಂತಿದ್ದು, ಈ ಮಧ್ಯೆ ಮಟ್ಟನ್ನೂರಿನಿಂದ ಕಳವುಗೈದ ಬೈಕ್ನಲ್ಲಿ ಮುಜೀಬ್ ರಹ್ಮಾನ್ ತಲುಪಿದ್ದಾನೆ. ವಾಹನಕ್ಕಾಗಿ ಕಾದು ನಿಂತಿದ್ದ ಅನುವನ್ನು ಮುಜೀಬ್ ರಹ್ಮಾನ್ ಗಮನಿಸಿದ್ದಾನೆ. ಬಳಿಕ ಆಕೆಯೊಂದಿಗೆ ಪರಿಚಯಸ್ಥನಂತೆ ನಟಿಸಿ ಮುಂದಿನ ಜಂಕ್ಷನ್ಗೆ ತಲುಪಿಸುವುದಾಗಿ ತಿಳಿಸಿ ಬೈಕ್ಗೆ ಹತ್ತಿಸಿಕೊಂಡಿದ್ದಾನೆ. ಪ್ರಯಾಣ ಮಧ್ಯೆ ವಾಳೂರು ನಡುಕಂಡಿಪಾರ ಎಫ್ಎಚ್ಸಿ ಬಳಿಯಿರುವ ತೋಡಿನ ಸಮೀಪ ಬೈಕ್ ನಿಲ್ಲಿಸಿದ ಮುಜೀಬ್ ರಹ್ಮಾನ್ ಅನುವಿನ ಕುತ್ತಿಗೆಯಿಂದ ಚಿನ್ನದಸರ ಎಳೆಯಲು ಯತ್ನಿಸಿದ್ದಾನೆ. ಆದರೆ ಅದನ್ನು ತಡೆದ ಅನುವನ್ನು ಆರೋಪಿ ದೂಡಿ ಹಾಕಿದ್ದನು. ಕೆಳಕ್ಕೆ ಬಿದ್ದು ಪ್ರಜ್ಞೆ ತಪ್ಪಿದ ಅನುವನ್ನು ತೋಡಿಗೆ ತಳ್ಳಿ ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾನೆ. ಬಳಿಕ ಆಕೆಯ ದೇಹದಲ್ಲಿದ್ದ ಆಭರಣಗಳನ್ನು ದೋಚಿದ ಆರೋಪಿ ಅದೇ ಬೈಕ್ನಲ್ಲಿ ಪರಾರಿಯಾದನೆಂದು ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳ ೯ರಂದು ಘಟನೆ ನಡೆದಿದೆ. ನಾಪತ್ತೆಯಾದ ಅನುವಿಗಾಗಿ ಮನೆಯವರು ಹುಡುಕಾಡುತ್ತಿದ್ದಾಗ ಮರುದಿನ ತೋಡಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಅನುವಿನ ದೇಹದಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಪೊಲೀಸ್ ಹಾಗೂ ಮನೆಯವರಿಗೆ ಸಂಶಯ ಹುಟ್ಟಿಸಿತು. ಮೃತದೇಹ ಪತ್ತೆಯಾದ ತೋಡಿನ ಅಲ್ಪವೇ ದೂರದಲ್ಲಿರುವ ಮನೆಗಳ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ತೋಡಿನ ಬಳಿಯಲ್ಲಾಗಿ ಬೈಕ್ ಸಂಚರಿಸುವುದು ಹಾಗೂ ಅದರಲ್ಲಿದ್ದ ವ್ಯಕ್ತಿಯ ಪ್ಯಾಂಟ್ ನ ಕೆಳಗೆ ಒದ್ದೆಯಾಗಿರುವುದು ಕಂಡುಬಂದಿತ್ತು. ಸಿಸಿ ಟಿವಿಯಲ್ಲಿ ಕಂಡುಬಂದ ವ್ಯಕ್ತಿಗಾಗಿ ಶೋಧ ನಡೆಸಿದಾಗ ಅದು ಮುಜೀಬ್ ರಹ್ಮಾನ್ ಎಂದು ತಿಳಿದುಬಂತು. ಕೂಡಲೇ ಕೊಂಡೋಟಿಯಲ್ಲಿರುವ ಆತನ ಮನೆಯನ್ನು ಸುತ್ತುವರಿದು ಅತೀ ಸಾಹಸದಿಂದ ಪೊಲೀಸರು ಸೆರೆಹಿಡಿದರು. ಬಳಿಕ ನಡೆಸಿದ ತನಿಖೆಯಲ್ಲಿ ಅನುವನ್ನು ಕೊಂದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
೨೦೨೨ ಸೆಪ್ಟಂಬರ್ನಲ್ಲಿ ಮತ್ತೇರಿ ಎಂಬಲ್ಲಿ ವೃದ್ಧೆಯನ್ನು ಮುಜೀಬ್ ರಹ್ಮಾನ್ ಕಳವುಗೈದ ಆಟೋ ರಿಕ್ಷಾದಲ್ಲಿ ಕರೆದೊಯ್ದು ಕೈಕಾಲುಗಳನ್ನು ಕಟ್ಟಿ ಹಾಕಿ ದೌರ್ಜನ್ಯಗೈದ ಬಳಿಕ ಚಿನ್ನಾಭರಣ ದರೋಡೆ ನಡೆಸಿದ್ದನು. ಈ ಪ್ರಕರಣದಲ್ಲಿ ಕೂತುಪರಂಬದ ಪತ್ನಿ ಮನೆಯಿಂದ ಸೆರೆಗೀಡಾದ ಈತ ಬಳಿಕ ರಿಮಾಂ ಡ್ನಲ್ಲಿದ್ದನು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದು ಬಳಿಕ ಅನುವನ್ನು ಕೊಲೆಗೈದ ಪ್ರಕರಣದಲ್ಲಿ ಇದೀಗ ಸೆರೆಗೀಡಾಗಿದ್ದಾನೆ.