ಮಳೆಯಿಂದ ವಿವಿಧೆಡೆ ವ್ಯಾಪಕ ನಾಶನಷ್ಟ: ಮಧೂರು ಕ್ಷೇತ್ರ ಜಲಾವೃತ: ಪೆರುವಾಡ್‌ನಲ್ಲಿ ಮನೆ, ಕ್ವಾರ್ಟರ್ಸ್‌ಗೆ ನುಗ್ಗಿದ ನೀರು: ಆಹಾರವಸ್ತುಗಳು, ಗೃಹೋಪಕರಣಗಳು, ದಾಖಲೆಪತ್ರಗಳು ನಾಶ; ಬಾಲಕನಿಗೆ ವಿದ್ಯುತ್ ಶಾಕ್

ಕಾಸರಗೋಡು: ಧಾರಾಕಾರ ಸುರಿ ಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ವ್ಯಾಪಕ ನಾಶನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ಹೊಳೆಗಳು ಉಕ್ಕಿ ಹರಿಯುತ್ತಿದ್ದು, ಇದರಿಂದ ತಗ್ಗು  ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ಇದು ಭಾರೀ ನಾಶನಷ್ಟಕ್ಕೆ ಕಾರಣವಾಗಿದೆ.

ಮಧುವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ನೀರು ನುಗ್ಗಿದೆ. ಮಧೂರು ಪೇಟೆಯಲ್ಲೂ ನೀರು ಆವೃತಗೊಂಡಿದ್ದು ವಾಹನ ಸಂಚಾರಕ್ಕೆ ಕಷ್ಟಪಡಬೇಕಾದ ಸ್ಥಿತಿ ಇಂದು ಬೆಳಿಗ್ಗೆ ಉಂಟಾಯಿತು.

ಮೊಗ್ರಾಲ್ ಪೆರುವಾಡ್ ರಾಷ್ಟ್ರೀಯ ಹೆದ್ದಾರಿ ಬಳಿ   ಒಂದು ಮನೆ ಹಾಗೂ ಕ್ವಾರ್ಟರ್ಸ್‌ನಲ್ಲಿ ನೀರು ತುಂಬಿಕೊಂಡಿದೆ.  ಪೆರುವಾಡ್‌ನ ಸೈನು ದ್ದೀನ್ ಎಂಬವರ ಮನೆಗೆ ನೀರು ನುಗ್ಗಿದ ಪರಿಣಾಮ ಇನ್ವರ್ಟರ್, ವಾಷಿಂಗ್ ಮೆಶಿನ್, ಫ್ರಿಡ್ಜ್ ಸಹಿತ ವಿವಿಧ ಗೃಹೋಪಕರಣಗಳು ಹಾನಿಗೀಡಾಗಿವೆ. ಇದೇ ವೇಳೆ   ಸೈನುದ್ದೀನ್‌ರ ಮಗ ರಿಶಾನ್‌ಗೆ ವಿದ್ಯುತ್ ಶಾಕ್ ತಗಲಿದೆ. ಆತ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಇದೇ ಪರಿಸರದಲ್ಲಿರುವ ಕ್ವಾರ್ಟರ್ಸ್‌ಗೂ ನೀರು ನುಗ್ಗಿದೆ. ಇದರಿಂದ ಅಲ್ಲಿ ವಾಸಿಸುವ ಪತ್ತನಂತಿಟ್ಟ ನಿವಾಸಿಯೂ ಕುಂಬಳೆ ಸಿಎಚ್‌ಸಿಯ ದಾದಿ ಶ್ರೀಲತಾ ಎಂಬವರ ಕೊಠಡಿ ಯೊಳಗೆ ನೀರು ತುಂಬಿ ವ್ಯಾಪಕ ನಾಶವುಂಟಾಗಿದೆ. ಬಟ್ಟೆಬರೆಗಳು, ಅಕ್ಕಿ ಸಹಿತ ಆಹಾರ ವಸ್ತುಗಳು ನೀರು ಪಾಲಾಗಿದೆ. ಅಲ್ಲದೆ ಗರ್ಭಿಣಿಯರ ಮಾಹಿತಿ ಒಳಗೊಂಡ ದಾಖಲೆ ಪುಸ್ತಕಗಳು ನೀರಿನಿಂದಾವೃತಗೊಂಡು ನಷ್ಟಗೊಂಡಿರುವುದಾಗಿ ತಿಳಿಸಲಾಗಿದೆ.

ಕುಂಬಳೆ-ಬದಿಯಡ್ಕ ರಸ್ತೆಯ ಶೇಡಿಮೂಲೆ ಎಂಬಲ್ಲಿ ಕಾಂಕ್ರೀಟ್ ರಸ್ತೆಗೆ ಸಮೀಪದ ಆವರಣಗೋಡೆ ಬಿದ್ದು ಸಾರಿಗೆ ಅಡಚಣೆ ಎದುರಾಗಿದೆ. ಕುಂಬಳೆ ಭಾಸ್ಕರ ನಗರದಲ್ಲಿ ಸೆಕೆಂಡ್ ಕ್ರಾಸ್‌ರೋಡ್‌ಗೆ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ  ತುಂಬಿಕೊಂಡಿದೆ. ಸ್ಥಳೀಯಕ್ಲಬ್‌ನ ಕಾರ್ಯಕರ್ತರು ಹಾಗೂ ನಾಗರಿಕರು ಸೇರಿ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ  ಕಲ್ಪಿಸಿದರು.

You cannot copy contents of this page