ಮಸೀದಿಯಲ್ಲಿ ಕಳವು: ಆರೋಪಿ ಬಂಧನ
ಕಾಸರಗೋಡು: ಜೂನ್ 24ರಂದು ಕಾಸರಗೋಡು ಸೂರ್ಲಿನ ಸಲಫಿ ಮಸೀದಿಗೆ ನುಗ್ಗಿ 3.10 ಲಕ್ಷ ರೂ. ನಗದು ಮತ್ತು ಎರಡು ಪವನ್ ಚಿನ್ನ ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಅಕಿವೀಡು, ಉರ್ದು ಶಾಲೆ ಬಳಿಯ ನಿವಾಸಿ ಮೊಹಮ್ಮದ್ ಸಲ್ಮಾನ್ ಅಹಮ್ಮದ್ (34) ಬಂಧಿತ ಆರೋಪಿ.
ಕಳವು ನಡೆದ ಮಸೀದಿ ಮತ್ತು ಪರಿಸರ ಪ್ರದೇಶಗಳ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು. ಅದರ ಜಾಡು ಹಿಡಿದು ಪೊಲೀಸರು ನಡೆಸಿದ ತನಿಖೆಯಲ್ಲಿ ಆತ ಕಲ್ಲಿಕೋಟೆಯಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಅದರಂತೆ ಪೊಲೀಸರು ಕಲ್ಲಿಕೋಟೆಗೆ ಹೋದಾಗ ಅಲ್ಲಿ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅಲ್ಲಿ ತನಿಖೆಯಲ್ಲಿ ಆರೋಪಿ ಆಂಧ್ರಪ್ರದೇಶಕ್ಕೆ ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಅದರಂತೆ ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಮಸೀದಿಗಳನ್ನು ಕೇಂದ್ರೀಕರಿಸಿ ಕಳವು ನಡೆಸುವ ವ್ಯಕ್ತಿ ಈತನಾಗಿದ್ದಾನೆ. ಇದೇ ರೀತಿ ಕಣ್ಣೂರು, ಪಾನೂರು, ಮಲಪ್ಪುರಂ, ಪಾಲಕ್ಕಾಡ್, ಕಸಬಾ ಮತ್ತು ಏಲತ್ತೂರು ಪೊಲೀಸ್ ಠಾಣೆಗಳಲ್ಲೂ ಈತನ ವಿರುದ್ಧ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಕಾಸರಗೋಡು ಪೊಲೀಸ್ ಇನ್‌ಸ್ಪೆಕ್ಟರ್ ನಳಿನಾಕ್ಷನ್ ಪಿಯವರ ಮೇಲ್ನೋಟದಲ್ಲಿ ಎಸ್‌ಐ ಜೊಜೊ ಜೋರ್ಜ್, ಪೊಲೀಸರಾದ ಸತೀಶನ್ ಪಿ, ರತೀಶ್ ಕುಮಾರ್ ಕೆ.ವಿ ಮತ್ತು ಜೆಮ್ಸ್ ಎಂ ಎಂಬಿವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.