ಮಹಾ ಕುಂಭಮೇಳದ ಮೇಲೆ ಪಾಕ್ ಕಣ್ಣು: ಎಲ್ಲೆಡೆ ಕಟ್ಟೆಚ್ಚರ
ಪ್ರಯಾಗ್‌ರಾಜ್: 144 ವರ್ಷಗಳ ನಂತರ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಪ್ರತಿದಿನ ಕೋಟ್ಯಂತರ ಭಕ್ತರು ಸ್ನಾನ ಮಾಡಿ ಪುನೀತರಾಗಿ ಮಿಂದೇಳುತ್ತಿದ್ದಾರೆ. ಇದರೊಂದಿಗೆ ಮಹಾ ಕುಂಭ ಮೇಳವು ಇದೀಗ ಕೇವಲ ಭಾರತದ ಹಬ್ಬವಾಗದೆ ಇಡೀ ಜಗತ್ತಿನ ಮಹಾ ಹಬ್ಬವಾಗಿ ಪರಿಗಣಿಸಲಾಗಿದೆ.
ಜನವರಿ ೧೩ರಂದು ಪ್ರಾರಂಭವಾದ ಮಹಾ ಕುಂಭಮೇಳ ಒಂದು ಕೋಟಿಗೂ ಅಧಿಕ ಜನರು ಭಾಗವಹಿಸಿದ್ದಾರೆ. ಇನ್ನು ಮಕರ ಸಂಕ್ರಾಂತಿ ದಿನವಾದ ನಿನ್ನೆ ಮೂರೂವರೆ ಕೋಟಿ ಜನರು ಭಾಗವಹಿಸಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಹಾ ಪ್ರಯಾಗ್‌ನಲ್ಲಿ ಆರಂಭಗೊಂಡಿರುವ ಈ ಮಹಾಕುಂಭ ಮೇಳದ ಮೇಲೆ ಪಾಕಿಸ್ತಾನದ ಕಣ್ಣು ಬಿದ್ದಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಸರಕಾರ, ಕುಂಭಮೇಳ ನಡೆಯುವ ಹಾಗೂ ಪರಿಸರ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಕಟ್ಟೆಚ್ಚರ ಏರ್ಪಡಿಸಿದ ಕುಂಭಮೇಳಕ್ಕೆ ಆಗಮಿಸುವ ಎಲ್ಲರನ್ನೂ ಪೊಲೀಸರ ಬಿಗಿ ತಪಾಸಣೆಗೊಳಪಡಿಸಿದ ಬಳಿಕವಷ್ಟೇ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಿಡುತ್ತಾರೆ. ಇನ್ನೊಂದೆಡೆ ಆಕಾಶಮಾರ್ಗವಾಗಿ ಡ್ರೋನ್‌ಗಳ ಕಣ್ಗಾವಲುಗಳನ್ನು ಏರ್ಪಡಿಸಲಾಗಿದೆ.
ಗೂಗಲ್ ಅಂಕಿ ಅಂಶದ ಪ್ರಕಾರ ಕುಂಭಮೇಳದ ಬಗ್ಗೆ ಭಾರತದ ನಂತರ ಅತೀ ಹೆಚ್ಚು ಜನರು ಸರ್ಚ್ ನಡೆಸಿದ್ದು ಭಾರತದ ವೈರಿ ರಾಷ್ಟ್ರವಾದ ಪಾಕಿಸ್ತಾನದವರೇ ಆಗಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹಲವು ಭಯೋತ್ಪಾದಕ ಸಂಘಟನೆಯವರು ಒಳಗೊಂಡಿರುವ ಶಂಕೆಯೂ ಇದೆ. ಅದರಿಂದಾಗಿ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ಪಾಲಿಸುತ್ತಿದ್ದಾರೆ. ಇನ್ನು ಖತ್ತಾರ್, ಯುಎಇ ಮತ್ತು ಬಹ್ರೈನ್ ಮೊದಲಾದ ಮುಸ್ಲಿಂ ದೇಶಗಳೂ ಮಹಾ ಕುಂಭಮೇಳದ ಕುರಿತು ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದಲ್ಲದೆ ನೇಪಾಳ, ಸಿಂಗಾಪುರ್, ಆಸ್ಟ್ರೇಲಿಯ, ಕೆನಡಾ, ಐರ್ಲೆಂಡ್, ಬ್ರಿಟನ್, ಸ್ಪೈನ್, ಥಾಯ್ಲೆಂಡ್, ಅಮೆರಿಕಾದಂತ ದೇಶಗಳ ಜನರೂ ಮಹಾ ಕುಂಭಮೇಳದ ಕುರಿತು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.