ಮಾಜಿ ಶಾಸಕ ಎಂ. ನಾರಾಯಣನ್ ನಿಧನ
ಹೊಸದುರ್ಗ: ಸಿಪಿಐ ನೇತಾರ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಡಿಕೈ ನಿವಾಸಿ ಎಂ. ನಾರಾಯಣನ್ (73) ನಿಧನ ಹೊಂದಿದರು. ಇವರನ್ನು ಅಸೌಖ್ಯ ನಿಮಿತ್ತ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಅದು ಫಲಕಾರಿ ಯಾಗದೆ ನಿನ್ನೆ ನಿಧನಹೊಂದಿದರು.
1991ರಿಂದ 2001ರ ತನಕ ಹೊಸದುರ್ಗ ವಿಧಾನಸಭಾ ಕ್ಷೇತ್ರ (ಈಗ ಕಾಞಂಗಾಡ್ ವಿಧಾನಸಭಾ ಕ್ಷೇತ್ರ)ದಲ್ಲಿ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. 2015ರಿಂದ 2020ರ ತನಕ ಕಾಸರಗೋಡು ಜಿಲ್ಲಾ ಪಂಚಾ ಯತ್‌ನ ಬೇಡಗಂ ಡಿವಿಶನ್‌ನಿಂದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಇವರು ಮಾಜಿ ಶಾಸಕ ಹಾಗೂ ಸಿಪಿಐ ಜಿಲ್ಲಾ ಸದಸ್ಯರೂ ಆಗಿದ್ದ ಎಂ. ಕುಮಾರರ ಸಹೋದರನಾಗಿದ್ದಾರೆ. 18 ವರ್ಷಗಳ ತನಕ ಪೋಸ್ಟ್‌ಮ್ಯಾನ್ ಆಗಿಯೂ ಸೇವೆ ಸಲ್ಲಿಸಿದ್ದರು. ನಂತರ ಆ ಕೆಲಸಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯ ಪ್ರವೇಶಿಸಿದರು. ಎಐ ವೈಎಫ್‌ಐ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಸಿಪಿಐಯ ಕಾಸರಗೋಡು ಜಿಲ್ಲಾ ಕೌನ್ಸಿಲ್ ಸದಸ್ಯ, ಸಿಪಿಐಯ ಕಾಞಂಗಾಡ್ ಮಂಡಲ ಕಾರ್ಯದರ್ಶಿ, ಕರ್ಷಕ ತೊಯಿಲಾಳಿ ಫೆಡರೇಶನ್‌ನ ರಾಜ್ಯ ಕಾರ್ಯದರ್ಶಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಆದಿವಾಸಿ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ದಿ| ಮಾವುವಳಪ್ಪಿಲ್ ಚಂದನ್ -ವೆಳ್ಳಚ್ಚಿ ದಂಪತಿ ಪುತ್ರನಾಗಿರುವ ನಾರಾಯಣನ್ ಪತ್ನಿ ಕೆ.ಎಂ.ಸರೋಜಿನಿ (ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ), ಮಕ್ಕಳಾದ ಎನ್.ಶೀನ (ಕಾಸರಗೋಡು ನಗರಸಭೆಯ ಹೆಲ್ತ್ ಇನ್‌ಸ್ಪೆಕ್ಟರ್), ಶಿಂಜಿತ್ತ್ (ಜಾನಪದ ಕಲಾಗಾರ), ಶಿಬಾ, ಅಳಿಯ-ಸೊಸೆಯಂದಿರಾದ ಸುರೇಶ್, ಗೋಪಾಲನ್, ರಜನಿ, ಸಹೋದರ-ಸಹೋದರಿಯರಾದ ಮಾಧವನ್ ಮಾವು ವಳಪ್ಪಿಲ್, ಎಂ.ವಿ. ಕುಂಞಂಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.