ಮಾದಕದ್ರವ್ಯ ಅಮಲಿನಲ್ಲಿ ಪತ್ನಿ, ಅತ್ತೆಯ ಬರ್ಬರ ಕೊಲೆ: ಆರೋಪಿ ಸೆರೆ
ಕಣ್ಣೂರು: ಮಾದಕ ದ್ರವ್ಯ ಸೇವಿಸಿದ ಅಮಲಿನಲ್ಲಿ ಯುವಕನೋರ್ವ ಆತನ ಪತ್ನಿ ಹಾಗೂ ಅತ್ತೆಯನ್ನು ಕಡಿದು ಬರ್ಬರವಾಗಿ ಕೊಲೆಗೈದ ಘಟನೆ ಕಣ್ಣೂರು ಜಿಲ್ಲೆಯ ಇರಿಟ್ಟಿಯಲ್ಲಿ ನಡೆದಿದೆ. ಇರಿಟ್ಟಿ ಮುಳಕುನ್ನು ವಿಳಿಕ್ಕೋಟ್ ಪಾರಾಕಂಡ ತೊಂಡನ್‌ಕುಳಿಯಿಲ್‌ನ ಸಲ್ಮ (36) ಹಾಗೂ ಆಕೆಯ ತಾಯಿ ಅಲೀಮ (೫೬) (ಪಿ.ಎಚ್. ಮೊಹಮ್ಮದ್‌ರ ಪತ್ನಿ)ಕೊಲೆಗೀಡಾದ ತಾಯಿ ಮತ್ತು ಮಗಳು. ಇದಕ್ಕೆ ಸಂಬಂಧಿಸಿ ಕೊಲೆಗೈಯ್ಯಲ್ಪಟ್ಟ ಸಲ್ಮಾಳ ಪತಿ ಮೂಲತಃ ಮಲಪ್ಪುರಂ ವಳಾಂಚೇರಿ ನಿವಾಸಿ ಶಾಹುಲ್ ಹಮೀದ್ (46ನನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾಳನ್ನು ಕಡಿಯುವುದನ್ನು ಕಂಡು ಅದನ್ನು ತಡೆಯಲು ಬಂದ ಆಕೆಯ ಪುತ್ರ ಫಹಾದ್ (12)ನನ್ನೂ ಆರೋಪಿ ಇರಿದು ಗಾಯಗೊಳಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವೇಳೆ ಸಲ್ಮಾಳ ಇನ್ನೋರ್ವ ಪುತ್ರ ಫರ್ಹಾನ್ ಮತ್ತು ಸಹೋದರರೂ ಮನೆಯಲ್ಲಿದ್ದರು. ಅವರು ಪ್ರಾಣಭಯದಿಂದ ತಮ್ಮ ಕೊಠಡಿಯೊಳಗೆ ಹೋಗಿ ಒಳಗಿನಿಂದ ಬಾಗಿಲು ಜಡಿದು ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ನಿನ್ನೆ ಮದ್ಯಾಹ್ನ ಸುಮಾರು ೧.೩೦ರ ವೇಳೆ ಸಲ್ಮಾಳ ಮನೆಯಲ್ಲೇ ಈ ಘೋರ ಅವಳಿ ಕೊಲೆಘಾತಕ ಕೃತ್ಯ ನಡೆದಿದೆ. ವಿಷಯ ತಿಳಿದ ಪೊಲೀಸರು ತಕ್ಷಣ ಆಗಮಿಸಿ ಆರೋಪಿ ಶಾಹುಲ್ ಹಮೀದ್‌ನನ್ನು ಅಲ್ಲಿಂದಲೇ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈತ ಓರ್ವ ಮಾದಕದ್ರವ್ಯ ವ್ಯಸನಿಯಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.