ಮಾನ್ಯಶ್ರೀ ಅಯ್ಯಪ್ಪ ಭಜನಾ ಮಂದಿರ ಕಳವು: ಬಂಧಿತ ಆರೋಪಿಗೆ ರಿಮಾಂಡ್
ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಕರ್ನಾಟಕದ ಕಡಬ ತಾಲೂಕು ಪೊಯ್ಲ ಆತೂರು ಕಳಾಯಿ ಹೌಸ್‌ನ ಇಬ್ರಾಹಿಂ ಕಲಂದರ್ ಯಾನೆ ಕೆ. ಇಬ್ರಾಹಿಂ (42)ನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿ ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಇದೇ ವೇಳೆ ಈ ಕಳವಿನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದೆಂದು ಶಂಸಯಿಸಲಾಗುತ್ತಿದೆ. ಅದ್ದರಿಂದ ಇದೀಗ ಸೆರೆಗೀಡಾದ ಆರೋಪಿಯನ್ನು ತನಿಖೆಗೊಳಪಡಿಸಿದರೆ ಇತರ ಆರೋಪಿಗಳ ಕುರಿತು ಮಾಹಿತಿ ಲಭಿಸಬಹುದೆಂಬ ನಿರೀಕ್ಷೆಯಿದೆ. ಆದ್ದರಿಂದ ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಅದೇ ರೀತಿ ಭಜನಾ ಮಂದಿರದಿಂದ ಕಳವಿಗೀಡಾದ ಸೊತ್ತುಗಳನ್ನು ಪತ್ತೆಹಚ್ಚಬೇಕಾಗಿದೆ. ಈ ತಿಂಗಳ ೪ರಂದು ಮುಂಜಾನೆ ಭಜನಾ ಮಂದಿರದಿಂದ ಕಳವು ನಡೆದಿದೆ. 6 ಲಕ್ಷ ರೂಪಾಯಿ ಮೌಲ್ಯದ ದೇವರ ರಜತ ಛಾಯಾಚಿತ್ರ, ಬೆಳ್ಳಿಯ ರುದ್ರಾಕ್ಷಿ ಮಾಲೆ, ಕಾಣಿಕೆ ಹುಂಡಿಯಿಂದ ಹಣವನ್ನು ಕಳ್ಳರು ದೋಚಿದ್ದಾರೆ. ಅದೇ ದಿನ ನೆಲ್ಲಿಕಟ್ಟೆ ಶ್ರೀ ನಾರಾಯಣ ಗುರುಮಂದಿರದಿಂದಲೂ ಕಳವು ನಡೆದಿತ್ತು.
ಈ ಎಲ್ಲಾ ಪ್ರಕರಣಗಳಲ್ಲೂ ಒಂದೇ ತಂಡ ಕಾರ್ಯಾಚರಿಸಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ದೃಢೀಕರಿಸಬೇಕಾದರೆ ಆರೋಪಿಯನ್ನು ಹೆಚ್ಚಿನ ತನಿಖೆಗೊಳಪಡಿಸಬೇಕಾದ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.