ಮಾಯಿಪ್ಪಾಡಿ ನಿವಾಸಿಯನ್ನು ಉಪ್ಪಳ ಕಡಲ ಕಿನಾರೆಗೆ ಕರೆದೊಯ್ದು ನಗ-ನಗದು ದರೋಡೆ: ಬಂಧಿತ ಓರ್ವನಿಗೆ ರಿಮಾಂಡ್; ಇತರ ನಾಲ್ಕು ಮಂದಿಗಾಗಿ ಶೋಧ
ಕುಂಬಳೆ: ಮಾಯಿಪ್ಪಾಡಿ ನಿವಾಸಿಯಾದ ಯುವಕನನ್ನು ಕಾರಿನಲ್ಲಿ ಉಪ್ಪಳದ ಕಡಲ ಕಿನಾರೆ ಭಾಗಕ್ಕೆ ಕರೆದೊಯ್ದು ಬಳಿಕ ಆತನ ಮೇಲೆ ಹಲ್ಲೆಗೈದು ಐದು ಪವನ್ ಚಿನ್ನಾಭರಣ ಹಾಗೂ ೧೩ ಸಾವಿರ ರೂಪಾಯಿ ದರೋಡೆಗೈದು ಪರಾರಿಯಾದ ಪ್ರಕರಣದಲ್ಲಿ ಕೊಲೆ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯಾದ ಓರ್ವನನ್ನು ಪೊಲೀಸರು ಸೆರೆಹಿಡಿದಿದ್ದು, ಇತರ ನಾಲ್ಕು ಮಂದಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಮಾಯಿಪ್ಪಾಡಿ ನಿವಾಸಿ ರಾಘವೇಂದ್ರ ಎಂಬಾತನನ್ನು ಈ ತಿಂಗಳ ೯ರಂದು ರಾತ್ರಿ ಕಾರಿನಲ್ಲಿ ಉಪ್ಪಳಕ್ಕೆ ತಂಡ ಕರೆದೊಯ್ದಿತ್ತು. ಬಳಿಕ ಅಲ್ಲಿನ ಕಡಲ ಕಿನಾರೆ ಭಾಗಕ್ಕೆ ತಲುಪಿಸಿ ಹಲ್ಲೆಗೈದು ಹಣ ಹಾಗೂ ಚಿನ್ನಾಭರಣ ದರೋಡೆ ನಡೆಸಿದ ಬಗ್ಗೆ ದೂರಲಾಗಿದೆ. ಘಟನೆ ಮಂಜೇಶ್ವರ ಪೊಲೀಸರ ಅರಿವಿಗೆ ಬಂದರೂ ದೂರು ಲಭಿಸದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿರಲಿಲ್ಲ. ಬಳಿಕ ಹಲ್ಲೆಗೀಡಾದ ರಾಘವೇಂದ್ರನನ್ನು ವಿಚಾರಿಸಿ ದೂರು ನೀಡುವಂತೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾಘವೇಂದ್ರ ಪೊಲೀಸರಿಗೆ ದೂರು ನೀಡಿದ್ದನ. ಇದರಂತೆ ಕಾಸರಗೋಡು ಬಟ್ಟಂಪಾರೆ ನಿವಾಸಿಯಾದ ಮಹೇಶ್ (೨೯) ಸಹಿತ ಐದು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಬಳಿಕ ಮಹೇಶ್‌ನನ್ನು ಕಾಸರಗೋಡಿನಿಂದ ಸೆರೆಹಿಡಿಯಲಾಗಿದೆ. ಈತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ಸೆರೆಹಿಡಿಯಲು ಬಾಕಿಯಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಲ್ಲೆಗೀಡಾದ ರಾಘವೇಂದ್ರ ಮದ್ಯ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.