ಮಿಲ್ಮಾಕ್ಕೆ 7.5 ಲಕ್ಷ ನೀಡಲು ಬಾಕಿ: ಜನರಲ್ ಆಸ್ಪತ್ರೆಯ ರೋಗಿಗಳಿಗೆ ಹಾಲು ವಿತರಣೆ ಮೊಟಕು

ಕಾಸರಗೋಡು: ಹಾಲು ಪೂರೈಸಿದ ವತಿಯಿಂದ ಮಿಲ್ಮಾಕ್ಕೆ ಸರಕಾರ ಏಳೂವರೆ ಲಕ್ಷ ರೂ. ನೀಡಲು ಬಾಕಿ ಇರುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯ ರೋಗಿಗಳಿಗೆ ವಿತರಿಸುವ ಹಾಲಿನ ಪೂರೈಕೆ ಕಳೆದೆರಡು ದಿನಗಳಿಂದ ಮಿಲ್ಮಾ ನಿಲುಗಡೆಗೊಳಿಸಿದೆ.

ಜನರಲ್ ಆಸ್ಪತ್ರೆಗೆ ಮಿಲ್ಮಾ ದೈನಂದಿನ ೪೫ ಲೀಟರ್ ತನಕ ಹಾಲು ವಿತರಿಸುತ್ತಿದೆ. ಇದರ ಹಣವನ್ನು ಒಂದು ವರ್ಷದ ಹಿಂದಿನ ತನಕ ಸರಕಾರಿ ಟ್ರಷರಿಯಿಂದ ಮಿಲ್ಮಾಕ್ಕೆ ನೀಡಲಾಗುತ್ತಿತ್ತು. ಆದರೆ ಕಳೆದ ಫೆಬ್ರವರಿಯಿಂದ ಹಣ ವಿತರಣೆ ಮೊಟಕುಗೊಂಡಿದೆ. ಈ ವಿಷಯವನ್ನು ಆಸ್ಪತ್ರೆಯ ಸಂಬಂಧಪಟ್ಟವರು ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಜನರಲ್ ಆಸ್ಪತ್ರೆ ಕಾಸರಗೋಡು ನಗರ ಸಭೆಯ ಅಧೀನದಲ್ಲಿ ಕಾರ್ಯವೆಸಗುತ್ತಿರುವುದರಿಂದ ಹಾಲಿನ  ಹಣವನ್ನು ನಗರಸಭೆಯಿಂದ ಕೇಳಿ ಪಡೆಯುವಂತೆ ಸರಕಾರ ಮಿಲ್ಮಾಕ್ಕೆ ನಿರ್ದೇಶ ನೀಡಿತ್ತು. ಅದರಂತೆ ಈಬಗ್ಗೆ  ನಗರಸಭೆಯ ಸಂಬಂಧಪಟ್ಟವರಿಗೆ ತಿಳಿಸಿದರೂ ಸಮಸ್ಯೆಗೆ ಈತನಕ ಪರಿಹಾರ ಉಂಟಾಗಲಿಲ್ಲ. ಜನರಲ್ ಆಸ್ಪತ್ರೆ ಸರಕಾರಿ ಸಂಸ್ಥೆಯಾಗಿದೆ. ಆದ್ದರಿಂದ ಮಿಲ್ಮಾಕ್ಕೆ ಹಣ ನೀಡುವ ವಿಷಯದಲ್ಲಿ ಸರಕಾರವೇ ತೀರ್ಮಾನಿಸಬೇಕಾಗಿದೆ ಎಂದು  ನಗರಸಭಾ ಅಧ್ಯಕ್ಷರು ಹೇಳಿದ್ದಾರೆ.  ಹಾಲಿನ ಹಣವನ್ನು ನಗರಸಭೆ ನೀಡಬೇಕೆಂದಾದಲ್ಲಿ ಅದಕ್ಕೆ ನಗರಸಭೆ ಹೊಸ ಯೋಜನೆಗೆ ರೂಪು ನೀಡಬೇಕಾಗಿ ಬರಲಿದೆ. ಅಲ್ಲದೆ ಇತರ ಯಾವುದೇ ಮಾರ್ಗವಿಲ್ಲ. ಒಂದು ವೇಳೆ ಇಂತಹ ಯೋಜನೆಗೆ ರೂಪು ನೀಡಿದಲ್ಲಿ ಅದಕ್ಕೆ ಅಂಗೀಕಾರ ಲಭಿಸಿ ಹಣ ವಿತರಣೆಗೆ ಫಂಡ್ ನೀಡಲು ತಿಂಗಳುಗಳ ಕಾಲ ಕಾಯ ಬೇಕಾಗಿ ಬರಲಿದೆ. ಆದ್ದರಿಂದ ಮಿಲ್ಮಾಕ್ಕೆ ನೀಡಬೇಕಾಗಿರುವ ಹಣದ ಬಗ್ಗೆ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆಯೆಂಬ ನಿರೀಕ್ಷೆಯನ್ನು ನಾವು ಹೊಂದಿರುವುದಾಗಿ  ನಗರಸಭಾ ಅಧ್ಯಕ್ಷರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page