ಮುಂಗಾರು ಮಳೆಯ ಅಬ್ಬರಕ್ಕೆ 9 ಮಂದಿ ಬಲಿ: ಬಿರುಗಾಳಿಯಿಂದ ವ್ಯಾಪಕ ನಾಶನಷ್ಟ

ಕಾಸರಗೋಡು: ವಾಡಿಕೆಗಿಂತಲೂ 10ದಿನಗಳ ಮೊದಲೇ ಕೇರಳಕ್ಕೆ  ಪ್ರವೇಶಿಸಿರುವ ನೈಋತ್ಯ ಮುಂಗಾರು ಮಳೆ ಆರಂಭದಲ್ಲೇ ರಾಜ್ಯದಲ್ಲಿ ವ್ಯಾಪಕ ಸಾವುನೋವು ಹಾಗೂ  ನಾಶನಷ್ಟಗಳನ್ನು ಸೃಷ್ಟಿಸಿದೆ. ಧಾರಾಕಾರ ಮಳೆಯ ಸಹಿತ ಎಡೆಬಿಡದೆ  ಬೀಸುತ್ತಿರುವ  ಬಿರುಗಾಳಿಯೇ ವ್ಯಾಪಕ ನಾಶನಷ್ಟಕ್ಕೆ ಪ್ರಧಾನ ಕಾರಣವಾಗಿದೆ. ಇದರಿಂದಾಗಿ ಕಾಸರಗೋಡು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಮರಗಳು ಧರೆಗುರುಳಿ ಬಿದ್ದಿದ್ದು ಇದು ನೂರಾರು ಮನೆಗಳನ್ನು ಹಾನಿಗೊಳಿಸಿದೆ ಮಾತ್ರವಲ್ಲ  ವಿದ್ಯುತ್ ಸಂಪರ್ಕವನ್ನು ಪೂರ್ಣವಾಗಿ ಅಸ್ತವ್ಯಸ್ಥಗೊಳಿಸಿದೆ. ಕಾಸರಗೋಡಿನಲ್ಲೂ  ವಿದ್ಯುತ್ ಸಂಪರ್ಕ ಪೂರ್ಣವಾಗಿ ನಿಲುಗಡೆಗೊಂಡಿದೆ.

ಮಳೆ ಅಬ್ಬರ ಇನ್ನೂ   ಮುಂದುವರಿಯುತ್ತಿದ್ದು ಇದರಿಂದಾಗಿ ಕಾಸರಗೋಡು ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ ಜಿಲ್ಲೆಗಳಲ್ಲಿ  ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 ಭಾರೀ ಮಳೆ ಮತ್ತು ಬಿರುಗಾಳಿ ರಾಜ್ಯದಲ್ಲಿ ೯ ಮಂದಿಯ ಪ್ರಾಣ ಅಪಹರಿಸಿದೆ.  ವಿದ್ಯುತ್ ಲೈನ್‌ನಿಂದ ಶಾಕ್ ತಗಲಿ ಮಲಪ್ಪುರಂ ವೆಳ್ಳಿಕುನ್ನು ಚೆಟ್ಟಿಪ್ಪಾಡಿಯ ಶ್ರೀರಾಗ್ (೧೭) ಎಂಬಾತ ಸಾವನ್ನಪ್ಪಿದ್ದಾನೆ. ಬಿರುಗಾಳಿಗೆ ಮರ ಬಿದ್ದು ಮೊಖೇರಿ ಕೂವಕುನ್ನುನ ಆದಿದೇವ್ (೧೫), ಪಾಂಬಾಟ್ಟುಪಾರದ ವಲಸೆ ಕಾರ್ಮಿಕೆ ಮಧ್ಯಪ್ರದೇಶದ ಮಾಲತಿ (೨೧), ವಡಗರೆ, ಕುನ್ನಿಲ್ ಮೀತಲ್ ಪವಿತ್ರನ್ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಪಾಲಕ್ಕಾಡ್ ತಿರುವಕ್ಕೋಡ್‌ನ ಸುರೇಶ್ (೪೮), ವಡುದಲ ಕೋಳರಿಕ್ಕಲ್ ಹೌಸ್‌ನ ಪ್ರದೀಪ್ (೫೩) ಎಂಬಿವರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಮಣ್ಣಾರ್‌ಕಾಡ್‌ನ ಉಮರಗಂ ಪುತ್ತೂರಿನಲ್ಲಿ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ಘಟನೆಯೂ ನಡೆದಿದೆ. ತಗಳಿಕುನ್ನುನಲ್ಲಿ ಗಾಳಿ ಮತ್ತು ಮಳೆಗೆ  ಮನೆಯ ಮೇಲ್ಛಾವಣಿ ಮೇಲೆ ಮರ ಕುಸಿದು ಬಿದ್ದು,  ೫ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಭಾರೀ ಮಳೆ ಸಾಧ್ಯತೆ ಇರುವ  ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾದ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ತೃಶೂರು, ಎರ್ನಾಕುಳಂ, ಇಡುಕ್ಕಿ, ಕೋಟ್ಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಇದರ ಹೊರತಾಗಿ ಕಾಸರಗೋಡು ಜಿಲ್ಲೆಯ ಕುಂಜತ್ತೂರು ಮತ್ತು ಕೋಟಕುಂಜೆ ಸೇರಿದಂತೆ ರಾಜ್ಯದ  ಸಮುದ್ರ ಕರಾವಳಿಯಲ್ಲಿ ಇಂದು ರಾತ್ರಿ ೮.೩೦ರ ತನಕ ೩ರಿಂದ ೪ ಮೀಟರ್ ಎತ್ತರದಲ್ಲಿ ಆಳೆತ್ತರದ ಅಲೆಗಳು ಏಳುವ ಹಾಗೂ ಭಾರೀ ಕಡಲ್ಕೊರೆತಕ್ಕೂ ದಾರಿಮಾಡಿ ಕೊಡಲಿದೆ. ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವ  ನಿವಾಸಿಗಳು ಹಾಗೂ ಬೆಸ್ತರಿಗೆ ಭಾರೀ ಜಾಗ್ರತಾ ನಿರ್ದೇಶವನ್ನು ಹವಾಮಾನ ಇಲಾಖೆ ನೀಡಿದೆ.

ಜಡಿ ಮಳೆ, ಬಿರುಗಾಳಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟೆಚ್ಚರ ನಿರ್ದೇಶ ನೀಡಲಾಗಿದೆ. ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕದಳ, ಮೀನುಗಾರಿಕಾ ಮತ್ತು ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳನ್ನು ಇದಕ್ಕಾಗಿ ಸಜ್ಜೀ ಕರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page