ಮುಂದಿನ ವರ್ಷದ ರಾಜ್ಯ ಕಲೋತ್ಸವ ಕಾಸರಗೋಡಿನಲ್ಲಿ: ಶಾಸಕರ ಬೇಡಿಕೆಗೆ ಸ್ಪೀಕರ್ರವರ ಬೆಂಬಲ: ಜನರನ್ನು ಒಟ್ಟುಗೂಡಿಸುವುದು ಶಾಲಾ ಕಲೋತ್ಸವದ ಪ್ರತ್ಯೇಕತೆ-ಶಂಸೀರ್
ಮುಳ್ಳೇರಿಯ: ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ನಿನ್ನೆ ಸಂಜೆ ವಿಧಾನಸಭೆಯ ಅಧ್ಯಕ್ಷ ಎ.ಎನ್. ಶಂಸೀರ್ ಉದ್ಘಾಟಿ ಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದವರು ಕೂಡಾ ಕಲೆಗಾಗಿ ಒಂದುಗೂಡುತ್ತಾರೆ. ಶಾಲಾ ಕಲೋತ್ಸವದ ವೈಶಿಷ್ಟ್ಯವೆಂದರೆ ಇದೇ ಆಗಿದೆ ಎಂದರು. ಕಲೆ, ಸಾಹಿತ್ಯ, ಕ್ರೀಡೆಗಳೆಲ್ಲಾ ರಾಜಕೀಯಾ ತೀತವಾಗಿ ವಿಭಿನ್ನ ಅಭಿರುಚಿಗಳನ್ನು ಮರೆತು ಒಂದುಗೂಡಿಸುವ ವೇದಿಕೆಯಾಗಿದೆ.
ಕಲೋತ್ಸವ ಮುಗಿದಾಗ ಇಲ್ಲಿ ಯಾವುದೇ ತ್ಯಾಜ್ಯವನ್ನು ಉಳಿಸದೆ ತ್ಯಾಜ್ಯಮುಕ್ತ ಕೇರಳದ ಗುರಿಗೆ ಸಹಕಾರ ನೀಡಬೇಕೆಂದು ಅವರು ಕರೆ ನೀಡಿದರು. ವಿದ್ಯಾರ್ಥಿ ದಿಶೆಯಲ್ಲೇ ತ್ಯಾಜ್ಯ ನಿರ್ಮೂಲನೆ, ಮಾದಕಪದಾರ್ಥ ವಿರುದ್ಧ ಹೋರಾಡುವ ಪಣ ತೊಡಬೇಕೆಂದು ಅವರು ನಡಿದರು. ಪ್ರಸ್ತುತ ಮಾಧ್ಯಮಗಳಲ್ಲಿ ಚರ್ಚೆಯಲ್ಲಿರುವ ವರದಕ್ಷಿಣೆ ಪಿಡುಗು, ವಿವಾದ ಮೊದಲಾದ ವಿಷಯಗಳಲ್ಲಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು.
ವಿಭಿನ್ನ ಭಾಷೆ, ವೇಷ, ಆಹಾರವನ್ನು ಹೊಂದಿರುವವರು ಭಾರತ ಎಂಬ ದೇಶದಲ್ಲಿ ಒಂದಾಗಿ ಜೀವಿಸುತ್ತಿದ್ದು, ಅದು ಮುಂದೆಯೂ ಯಾವುದೇ ತಡೆಯಿಲ್ಲದೆ ಸಾಗಬೇಕೆಂದು ಅವರು ನುಡಿದರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಸಕ ಎನ್.ಎ. ನೆಲ್ಲಿಕುನ್ನು ಮುಂದಿನ ವರ್ಷದ ರಾಜ್ಯ ಮಟ್ಟದ ಕಲೋತ್ಸವ ತನ್ನ ಮಂಡಲದಲ್ಲಿ ನಡೆಸುವುದಕ್ಕೆ ವಿಧಾನಸಭಾಧ್ಯಕ್ಷರು ಒತ್ತಡ ಹಾಕಬೇಕೆಂದು ತಿಳಿಸಿದಾಗ, ಈ ವಿಷಯದಲ್ಲಿ ತಾನು ಮಾಡಬಹುದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷ ಎನ್.ಎ. ನೆಲ್ಲಿಕುನ್ನು, ಶಾಸಕರಾದ ಇ. ಚಂದ್ರಶೇಖರನ್, ಎಕೆಎಂ ಅಶ್ರಫ್ ಮಾತನಾಡಿದರು. ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಎಂ. ಸಂಜೀವ ವಂದಿಸಿದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆ, ಲಾಂಛನ ಸಿದ್ಧಪಡಿಸಿದ, ಸ್ವಾಗತ ಗಾನ ರಚಿಸಿದವರನ್ನು ಅಭಿನಂದಿಸಲಾಯಿತು.