ಮುಂದುವರಿದ ಧಾರಾಕಾರ ಮಳೆ: ತಗ್ಗು ಪ್ರದೇಶಗಳು ಜಲಾವೃತ; ಮಂಜೇಶ್ವರದಲ್ಲಿ ಹಲವು ಕುಟುಂಬಗಳು ಸ್ಥಳಾಂತರ; ಮನೆಗಳು ಅಪಾಯ ಭೀತಿಯಲ್ಲಿ

ಉಪ್ಪಳ: ಫೆಂಜಲ್  ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿವಿಧೆಡೆ ವ್ಯಾಪಕ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ವಿವಿಧೆಡೆ  ಮನೆಗಳಿಗೆ ನೀರು ನುಗ್ಗಿದ್ದು, ಜನರಿಗೆ ವಾಸಮಾಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಅದೇ ರೀತಿ ತಗ್ಗುಪ್ರ ದೇಶಗಳು ಜಲಾವೃತಗೊಂಡಿದೆ.

ಉಪ್ಪಳ, ಮಂಜೇಶ್ವರ ಭಾಗದಲ್ಲಿ ವ್ಯಾಪಕವಾಗಿ ಮಳೆ ನೀರು ಕಟ್ಟಿ ನಿಂತಿದೆ. ಉಪ್ಪಳಗೇಟ್ ಸಮೀಪ ವಾಸಿಸುವ ಎಂ.ಪಿ. ಸಿದ್ದಿಕ್, ಫಾರೂಕ್, ಅಂದು ಹಾಜಿ, ಅಬು ಹಾಜಿ, ಸಕರಿಯ, ಮೋನು ಅರಬಿ, ಪಕ್ರುಂಞಿ, ಅಬ್ದುಲ್ಲ, ಅಬ್ದುಲ್ ರಹಿಮಾನ್, ಅಚ್ಚಾಪು ಮೊದಲಾದವರ ಮನೆಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹರಿದು ಬಂದ ಮಳೆ ನೀರು ಮನೆಯೊಳಗೆ ನುಗ್ಗಿದೆಯೆನ್ನಲಾಗು ತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನಿರ್ಮಿಸಲಾಗಿದೆಯಾದರೂ ಅದರಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿರುವುದೇ ಈ ಸ್ಥಿತಿಗೆ ಕಾರಣ ವಾಗಿದೆಯೆಂದು ಸ್ಥಳೀಯರು ದೂರುತ್ತಿದ್ದಾರೆ. ಮಳೆ ನೀರಿನೊಂದಿಗೆ ತ್ಯಾಜ್ಯ ಮನೆ ಅಂಗಳದಲ್ಲಿ ಹಾಗೂ ಬಾವಿಗಳಿಗೆ ಸೇರುತ್ತಿದೆ ಎಂದೂ ಇದರಿಂದ  ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ದೂರಲಾಗಿದೆ. ಪೊಸೋಟು ನಲ್ಲೂ ರಸ್ತೆ ಬದಿಯಿರುವ ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಪ್ರದೇಶ ಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಹೊಸಂಗಡಿಯಲ್ಲಿ ನೀರು ತುಂಬಿ ಕೊಂಡ ಹಿನ್ನೆಲೆಯಲ್ಲಿ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಇಲ್ಲಿನ ೧೫  ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಉಪ್ಪಳ ಗೇಟ್, ಉಪ್ಪಳ ಪೇಟೆ, ನಯಾಬಜಾರ್, ಹೊಸಂಗಡಿ, ಬಂದ್ಯೋಡು ಮೊದಲಾದೆಡೆ ರಾಷ್ಟ್ರೀಯ ಹೆದ್ದಾರಿ, ಸರ್ವೀಸ್ ರಸ್ತೆ, ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು.

ಪ್ರತಾಪನಗರ ಪ್ರಧಾನ ರಸ್ತೆಯ ಶಿವಶಕ್ತಿ ಕ್ಲಬ್ ಬಳಿ, ಒಳರಸ್ತೆ, ಪುಳಿಕುತ್ತಿ ಪರಿಸರ ಪ್ರದೇಶದ ರಸ್ತೆಗಳಲ್ಲೂ ನೀರು ತುಂಬಿಕೊಂಡು ಸಮಸ್ಯೆ ಎದುರಾಗಿದೆ.ಪ್ರತಾಪನಗರ ರಸ್ತೆಯಿಂದ ಹರಿದುಬಂದ ನೀರು ಸಮೀಪದ ಹಿತ್ತಿಲಿನಲ್ಲಿ ತುಂಬಿಕೊಂಡಿದೆ. ಇದರಿಂದ ಆವರಣಗೋಡೆ ಕುಸಿದು ಬಿದ್ದಿದೆ.  ಹಲವು ಬಾಳೆಗಳು ನಾಶ ಗೊಂಡಿದೆ. ಬಲವಾದ ಗಾಳಿಗೆ ಸಿಲುಕಿ ಮನೆಗೆ ಹಾಸಲಾದ ಶೀಟ್ ಹಾರಿಹೋಗಿದೆ.

Leave a Reply

Your email address will not be published. Required fields are marked *

You cannot copy content of this page