ಮುಂಬೈ-ತಿರುವನಂತಪುರ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ
ತಿರುವನಂತಪುರ: ಮುಂಬೈ-ತಿರುವನಂತಪುರ ಮಧ್ಯೆ ಸೇವೆ ನಡೆಸುವ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆಯುಂಟಾಗಿದ್ದು, ಇದರಿಂದಾಗಿ ಆ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್ (ಭೂಸ್ಪರ್ಶ) ನಡೆಸಲಾಯಿತು.
ಏರ್ ಇಂಡಿಯಾ ವಿಮಾನ ಇಂದು ಬೆಳಿಗ್ಗೆ ೫.೪೫ಕ್ಕೆ ಮುಂಬೈಯಿಂದ ತಿರುವನಂತಪುರಕ್ಕೆ ಪ್ರಯಾಣ ಆರಂಭಿಸಿತ್ತು. ಅದು 8.10 ಕ್ಕೆ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಬೇಕಾಗಿತ್ತು. ಪ್ರಯಾಣ ಮಧ್ಯೆ 7.30 ಕ್ಕೆ ವಿಮಾನದ ಪೈಲೆಟ್‌ಗೆ ಈ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆಯೆಂಬ ಬೆದರಿಕೆ ಸಂದೇಶ ಲಭಿಸಿದೆ. ತಕ್ಷಣ ಆ ಮಾಹಿತಿಯನ್ನು ಅವರು ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೂ ರವಾನಿಸಿದ್ದಾರೆ. ಮಾತ್ರವಲ್ಲ ಇಂದು ಬೆಳಿಗ್ಗೆ 8.10 ಕ್ಕೆ ತಲುಪಬೇಕಾಗಿದ್ದ ವಿಮಾನವನ್ನು 10 ನಿಮಿಷಗಳ ಮೊದಲೇ ತುರ್ತಾಗಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಡೆಸಿದ್ದರು. ಆ ವಿಮಾನದಲ್ಲಿ 135 ಮಂದಿ ಪ್ರಯಾಣಿಕರಿದ್ದರು. ಅವರನ್ನೆಲ್ಲಾ ತುರ್ತಾಗಿ ವಿಮಾನದಿಂದಿಳಿಸಿ ಸುರಕ್ಷಿತ ತಾಣಕ್ಕೆ ಸಾಗಿಸಲಾಯಿತು. ವಿಮಾನವನ್ನು ನಂತರ ಆ ವಿಮಾನ ನಿಲ್ದಾಣದ ಐಸೋಲೇಶನ್ ವೇ (ದಾರಿ)ಗೆ ಸಾಗಿಸಿ ಅದನ್ನು ಭದ್ರತಾಪಡೆ ಸೂಕ್ಷ್ಮ ಪರಿಶೀಲನೆ ಆರಂಭಿಸುತ್ತಿದೆ. ಪರಿಶೀಲನೆ ಇನ್ನೂ ಮುಂದುವರಿ ಯುತ್ತಿದೆ. ಬೆದರಿಕೆ ಹಿನ್ನೆಲೆಯಲ್ಲಿ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ. ಆದರೆ ಇದು ಇತರ ವಿಮಾನಗಳ ಸೇವೆಗೆ ಹಾಗೂ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯ ಪತ್ತೆಗಾಗಿರುವ ತನಿಖೆಯನ್ನು ತೀವ್ರಗೊಳಿಸಲಾಗಿದೆಯೆಂದು ಭದ್ರತಾಪಡೆ ಹಾಗೂ ಪೊಲೀಸರು ತಿಳಿಸಿದ್ದಾರೆ.