ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ರಾಮನಗರ: ಮಾಜಿ ಡೋನ್ ಮುತ್ತಪ್ಪ ರೈಯ ಪುತ್ರ ರಿಕ್ಕಿ ರೈಯ ಮೇಲೆ ನಿನ್ನೆ ಮಧ್ಯರಾತ್ರಿ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಮನೆ ಬಳಿ  ಗುಂಡಿನ ದಾಳಿ ನಡೆದಿದೆ. ಆದರೆ ಕೂದಲೆಳೆ ಅಂತರದಲ್ಲಿ ರಿಕ್ಕಿ ರೈ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ  ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.   ನಿನ್ನೆ ರಾತ್ರಿ ಸುಮಾರು 11.30ರ ವೇಳೆ ಈ ಗುಂಡಿನ ದಾಳಿ ನಡೆದಿದೆ. ಡ್ರೈವಿಂಗ್ ಸೀಟನ್ನು ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಆದರೆ  ಹಿಂಬದಿ ಸೀಟಿನಲ್ಲಿದ್ದ ರೈಯ ಮೂಗು, ಕೈಗೆ ಗುಂಡು ತಗಲಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾಧಾರಣವಾಗಿ  ರಿಕ್ಕಿ ರೈಯೇ ಕಾರು ಚಲಾಯಿಸುತ್ತಿದ್ದರು. ಆದರೆ ನಿನ್ನೆ  ಡ್ರೈವರ್ ಕಾರು ಚಲಾಯಿಸಿದ್ದರು. ಅದರಿಂದಾಗಿ ಅವರು ಸಂಭಾವ್ಯ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು  ರಿಕ್ಕಿ  ರೈಯವರ ಮನೆ ಗೇಟಿನ ಬಳಿಯೇ ಎರಡು ಸುತ್ತು ಗುಂಡು ಹಾರಿಸಿದ್ದಾರೆ.  70 ಎಂಎಂ ಬುಲ್ಲೆಟ್‌ನ ಶಾರ್ಟ್ ಗನ್ ಬಳಸಿ ಫಯರಿಂಗ್ ಮಾಡಲಾಗಿದೆ.

ರಷ್ಯಾದಲ್ಲಿ ನೆಲೆಸಿರುವ ರಿಕ್ಕಿ ರೈ  ಎರಡು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ನಿನ್ನೆ ತಡರಾತ್ರಿ ಮನೆಯಿಂದ ತಮ್ಮ ಫಾರ್ಚ್ಯೂನ್ ಕಾರಿನಲ್ಲಿ ಬೆಂಗಳೂರಿಗೆ ಹೋಗಲೆಂದು ಮನೆ ಗೇಟಿನಿಂದ ಕಾರು ಹೊರ ಬರುತ್ತಿದ್ದಂತೆಯೇ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ.  ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.

You cannot copy contents of this page