ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿದ ತೀರ್ಪಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆಯಾಜ್ಞೆ
ಕೊಚ್ಚಿ: ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎನ್ ರಾಮಚಂದ್ರನ್‌ರ ಏಕಸದಸ್ಯ ಪೀಠ ನೀಡಿದ ತೀರ್ಪಿಗೆ ಹೈಕೋ ರ್ಟ್‌ನ ವಿಭಾಗೀಯ ಪೀಠ ಇಂದು ಬೆಳಿಗ್ಗೆ ತಡೆಯಾಜ್ಞೆ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಎಸ್. ಮನು ಎಂಬವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ತಡೆಯಾಜ್ಞೆ ಜ್ಯಾರಿಗೊಳಿಸಿದೆ.
ಮುನಂಬಂ ಗ್ರಾಮದಲ್ಲಿ ಸುಮಾರು 600ರಷ್ಟು ಕುಟುಂಬಗಳು ವಾಸಿಸುತ್ತಿ ರುವ ಪ್ರದೇಶ ತಮಗೆ ಸೇರಿದ್ದಾಗಿದೆ ಎಂದು ವಕ್ಫ್‌ನ ಕೇರಳ ಘಟಕ ಹಕ್ಕು ವಾದ ಮಂಡಿಸಿರುವುದನ್ನು ಪ್ರತಿಭಟಿಸಿ ಆ ಪ್ರದೇಶದ ಜನರು ತಿಂಗಳುಗಳಿಂದ ಆರಂಭಿಸಿರುವ ಚಳವಳಿ ಈಗಲೂ ಮುಂದುವರಿಯುತ್ತಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುನಂಬಂ ಭೂ ವಿವಾದದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ನ್ಯಾಯಾಂಗ ಆಯೋಗ (ಜ್ಯುಡೀಶ್ಯಲ್ ಕಮಿಶನ್)ಗೆ ರೂಪು ನೀಡಿತ್ತು. ಅದರ ವಿರುದ್ಧ ಚಳವಳಿನಿರತರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿ ದಿನಗಳ ಹಿಂದೆ ತೀರ್ಪು ನೀಡಿತ್ತು. ಅದರ ವಿರುದ್ಧ ರಾಜ್ಯ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ವಿಭಾಗೀಯ ಪೀಠ ಇಂದು ಬೆಳಿಗ್ಗೆ ಈ ತಡೆಯಾಜ್ಞೆ ಹೊರಡಿಸಿದೆ. ಮಾತ್ರವಲ್ಲ ಸರಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯ ಪರಿಶೀಲನೆಯನ್ನು ವಿಭಾಗೀಯ ಪೀಠ ಜೂನ್ ತಿಂಗಳಿಗೆ ಮುಂದೂಡಿದೆ. ಅಷ್ಟರ ತನಕ ನ್ಯಾಯಾಂಗ ಆಯೋಗಕ್ಕೆ ಮುಂದುವರಿಯಬಹುದೆಂದೂ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಇದರಿಂದಾಗಿ ರಾಜ್ಯ ಸರಕಾರಕ್ಕೆ ತಾತ್ಕಾಲಿಕ ನೆಮ್ಮದಿ ಲಭಿಸಿದಂತಾಗಿದೆ.