ಮುಷ್ಕರ: ವಾಹನಗಳಿಗೆ ತಡೆಯೊಡ್ಡಿ, ಪೊಲೀಸರಿಗೆ ಹಲ್ಲೆ: ಸಿಪಿಎಂ ನೇತಾರ ಸಹಿತ ಮೂವರ ಬಂಧನ
ಕುಂಬಳೆ: ನಿನ್ನೆ ನಡೆದ ಮುಷ್ಕರದ ಸಂದರ್ಭದಲ್ಲಿ ಸೀತಾಂಗೋಳಿಯಲ್ಲಿ ವಾಹನಗಳಿಗೆ ತಡೆಯೊಡ್ಡಿ ಬಳಿಕ ಪೊಲೀಸರಿಗೆ ಹಲ್ಲೆಗೈದು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಸಿಪಿಎಂ ನೇತಾರನ ಸಹಿತ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಸಿಪಿಎಂ ಲೋಕಲ್ ಸೆಕ್ರೆಟರಿ ಹಾಗೂ ಏರಿಯಾ ಕಮಿಟಿ ಸದಸ್ಯನಾದ ಅರಿಯಪ್ಪಾಡಿ ಕೂಡ್ಲುವಿನ ಸಂತೋಷ್ ಕುಮಾರ್ ಕೆ.ಎ.(44), ಬಾಡೂರು ಶೇಣಿಯ ಬಿನೀಶ್ ಪಿ.ಎಂ.(35), ಮುಗು ಪಳ್ಳತ್ತಡ್ಕದ ಮಧು ಸೂದನ ಪಿ. (37) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.