ಮೂರು ಸಾಮಗ್ರಿಗಳಿಗೆ ಬೆಲೆಯೇರಿಸಿದ ಸಪ್ಲೈಕೋ
ತಿರುವನಂತಪುರ: ಓಣಂ ಸಂತೆಗಳು ಇಂದು ಆರಂಭಗೊಂಡಿ ರುವಂತೆಯೇ ಮೂರು ಸಬ್ಸಿಡಿ ಸಾಮಗ್ರಿಗಳಿಗೆ ಸಪ್ಲೈಕೋ ಬೆಲೆ ಏರಿಸಿದೆ. ಅಕ್ಕಿ, ಬೇಳೆ, ಸಕ್ಕರೆ ಎಂಬಿವುಗಳಿಗೆ ಬೆಲೆಯೇರಿಕೆ ಮಾಡಿರುವುದಾಗಿ ವರದಿಯಾಗಿದೆ. ಸರಕಾರದ ಸಹಾಯ ಲಭಿಸಿಯೂ ಸಪ್ಲೈ ಕೋದಲ್ಲಿ ಬೆಲೆ ಹೆಚ್ಚಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದೇ ವೇಳೆ ಏಳು ವರ್ಷಗಳ ಬಳಿಕ ನಾಮಮಾತ್ರವಾಗಿ ಬೆಲೆಯೇರಿಕೆ ಮಾಡಲಾಗಿದೆ ಎಂದು ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಕುರುವ ಅಕ್ಕಿಯ ಬೆಲೆ 30 ರೂ.ನಿಂದ 33 ರೂ.ಗೇರಿಸಲಾಗಿದೆ. ಮಟ್ಟ ಅಕ್ಕಿಗೆ ಕಿಲೋ ಒಂದರ ಮೇಲೆ ೩ ರೂ. ಹೆಚ್ಚಿಸಲಾಗಿದೆ. ಬೆಳ್ತಿಗೆ ಅಕ್ಕಿ ಬೆಲೆ 26ರಿಂದ 29ಕ್ಕೇರಿದೆ. ತೊಗರಿ ಬೇಳೆಯ ಬೆಲೆ 111ರಿಂದ 115ಕ್ಕೆ ತಲುಪಿದೆ. 27 ರೂ. ಇದ್ದ ಸಕ್ಕರೆಗೆ ಇನ್ನು 33 ರೂಪಾಯಿ ನೀಡಬೇಕಾಗಿದೆ. ಬೆಲೆ ಹೆಚ್ಚಿಸಿದ ಸಾಮಗ್ರಿಗಳಿಗೆ ಈಗಲೂ ಸಾರ್ವಜನಿಕ ಮಾರುಕಟ್ಟೆಗಳಲ್ಲಿ 30 ಶೇ.ದಷ್ಟು ಬೆಲೆ ಕಡಿಮೆಯಿದೆಯೆಂದು ಆಹಾರ ಇಲಾಖೆ ಸ್ಪಷ್ಟೀಕರಣ ನೀಡುತ್ತಿದೆ. ಇತ್ತೀಚೆಗೆ ಸರಕಾರ ಸಪ್ಲೈ ಕೋಗೆ 225 ಕೋಟಿ ರೂ. ಮಂಜೂರು ಮಾಡಿತ್ತು. ಇದರಲ್ಲಿ 150 ಕೋಟಿ ರೂಪಾಯಿ ಹಸ್ತಾಂತರಿ ಸಲಾಗಿದೆ. ಇಂದಿನಿಂದ 14ರ ವರೆಗೆ ಓಣಂ ಸಂತೆಗಳು ಕಾರ್ಯಾಚರಿಸಲಿವೆ.