ಮೆಟ್ಟಿಲು ಪೂಜೆಗೆ ಈಗ ಬುಕ್ ಮಾಡಿದಲ್ಲಿ ಅವಕಾಶ ೨೦೩೮ಕ್ಕೆ
ಶಬರಿಮಲೆ: ಶಬರಿಮಲೆ ಕ್ಷೇತ್ರದಲ್ಲಿ ಅತೀ ಹೆಚ್ಚು ವೆಚ್ಚ ತಗಲುವ ಮೆಟ್ಟಿಲು ಪೂಜೆಗೆ ಈಗ ಮುಂಗಡ ಬುಕ್ಕಿಂಗ್ ನಡೆಸಿದಲ್ಲಿ ಅದನ್ನು ಈಡೇರಿಸುವ ಭಾಗ್ಯ ೨೦೩೮ರ ವೇಳೆಯಲ್ಲಷ್ಟೇ ಲಭಿಸಲಿದೆ. ಬುಕ್ ಮಾಡಿದವರು ಆ ತನಕ ಕಾದು ನಿಲ್ಲಬೇಕಾಗಿ ಬರಲಿದೆ. ಶಬರಿಮಲೆಯಲ್ಲಿ ಮೆಟ್ಟಿಲು ಪೂಜೆಗೆ ೧,೩೭,೯೦೦ ರೂ. ಹಾಗೂ ಉದಯಾಸ್ತಮಾನ ಪೂಜೆಗೆ ೬೧,೮೦೦ ರೂ.ವನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಬೇಕಾಗಿದೆ. ಶಬರಿಮಲೆಗೆ ಈ ವರ್ಷ ಹರಿದು ಬರುತ್ತಿರುವ ಭಕ್ತ ಪ್ರವಾಹದಲ್ಲಿ ಭಾರೀ ಹೆಚ್ಚಳ ಉಂಟಾಗತೊಡಗಿದ್ದು, ಅದರಿಂದಾಗಿ ಭಕ್ತರ ಭಾರೀ ನಿಬಿಢತೆಯನ್ನು ಪರಿಗಣಿಸಿ ಮೆಟ್ಟಿಲು ಪೂಜೆ ಮತ್ತು ಉದಯಾಸ್ತಮಾನ ಪೂಜೆಯನ್ನು ಶಬರಿಮಲೆಯ ಈ ತೀರ್ಥಾಟನೆ ಋತು ವೇಳೆ ಹೊರತುಪಡಿಸಲಾಗಿದೆ.
ಶಬರಿಮಲೆ ಕ್ಷೇತ್ರದ ಹದಿನೆಂಟು ಮೆಟ್ಟಿಲುಗಳನ್ನು ಮೊದಲು ನೀರಿನಿಂದ ತೊಳೆದು ಶುದ್ಧೀಕರಿಸಿ ರೇಷ್ಮೆ ಬಟ್ಟೆಯಿಂದ ಹೊದಿಸಿ ದೀಪಾಲಂಕಾರಗೊಳಿಸಿದ ಮೆಟ್ಟಿಲ ಪೂಜೆ ನಡೆಸಲಾಗುತ್ತಿದೆ. ದೀಪಾರಾಧನೆ ಕಳೆದ ಬಳಿಕವಷ್ಟೇ ಮೆಟ್ಟಿಲು ಪೂಜೆ ನಡೆಸಲಾಗುತ್ತದೆ. ಮೆಟ್ಟಿಲುಗಳಲ್ಲಿ ಅಲಂಕರಿಸಿ ಸಿದ್ಧ ಪಡಿಸಲು ಕನಿಷ್ಠ ೩೦ ನಿಮಿಗಳಾದರೂ ಬೇಕಾಗಿ ಬರುತ್ತದೆ. ನಂತರ ಮೆಟ್ಟಿಲು ಪೂಜಾ ಕ್ರಮ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ಗಂಟೆಯಾದರೂ ಬೇಕಾಗಿ ಬರುತ್ತದೆ. ಅಷ್ಟರ ತನಕ ಭಕ್ತರನ್ನು ೧೮ ಏರಲು ಅವಕಾಶ ನೀಡಲಾಗುತ್ತಿಲ್ಲ. ಇದರಿಂದಾಗಿ ತೀರ್ಥಾಟಕರು ಈ ಪೂಜೆ ಕಳೆಯುವ ತನಕ ಕಾದು ನಿಲ್ಲಬೇಕಾಗಿ ಬರುತ್ತದೆ. ಇದುವೇ ಶಬರಿಮಲೆಯ ಈ ವರ್ಷದ ತೀರ್ಥಾಟನಾ ಋತುವಿನಲ್ಲಿ ಮೆಟ್ಟಿಲು ಮತ್ತು ಉದಯಾಸ್ತಮಾನ ಸೇವೆಯನ್ನು ಹೊರತುಪಡಿಸಲು ಮುಜರಾಯಿ ಮಂಡಳಿ ತೀರ್ಮಾನ ಕೈಗೊಂಡಿರುವುದು ಪ್ರಧಾನ ಕಾರಣವಾಗಿದೆ.