ಮೆಟ್ರೋ ರೈಲ್ವೇ ಸೇತುವೆಯಿಂದ ಜಿಗಿದು ಯುವಕ ಸಾವು
ಕೊಚ್ಚಿ: ಮೆಟ್ರೋ ರೈಲ್ವೇ ಸೇತುವೆ ಮೇಲಿಂದ ಜಿಗಿದು ಯುವಕ ಸಾವಿಗೀಡಾದ ಘಟನೆ ನಡೆದಿದೆ. ಮಲಪ್ಪುರಂ ಚುಳ್ಳಿಪ್ಪಾರ ವೀರಾಶೇರಿ ಕುಂಞುಮೊಯ್ದೀನ್ ಎಂಬವರ ಪುತ್ರ ನಿಸಾರ್ ಸಾವಿಗೀಡಾದ ಯುವಕನಾಗಿದ್ದಾನೆ. ತೃಪುಣಿತ್ತುರ ವಡಕ್ಕೇಕೋಟ- ಎಸ್.ಎನ್. ಜಂಕ್ಷನ್‌ನ ಮೆಟ್ರೋ ನಿಲ್ದಾಣದ ಮಧ್ಯೆ ಘಟನೆ ನಡೆದಿದೆ. ವಡಕ್ಕೇಕೋಟದಿಂದ ತೃಪುಣಿತ್ತುರಕ್ಕೆ ಟಿಕೆಟ್ ಪಡೆದ ಬಳಿಕ ನಿಸಾರ್ ಪ್ಲಾಟ್‌ಫಾಮ್‌ಗೆ ತಲುಪಿದ್ದನು. ಬಳಿಕ ಪ್ಲಾಟ್‌ಫಾಮ್ ದಾಟಿ ಹೊರಗೆ ಓಡಿದ್ದು, ಅದನ್ನು ಕಂಡ ಮೆಟ್ರೋ ಅಧಿಕಾರಿಗಳು ವಿದ್ಯುತ್ ಸಂಪರ್ಕ ವಿಚ್ಚೇಧಿಸಿ ರೈಲು ಸಂಚಾರಕ್ಕೆ ತಡೆಯೊಡ್ಡಿದರು. ಅನಂತರ ನಿಸಾರ್‌ನನ್ನು ಸಮಾಧಾನಪಡಿಸಿ ಕೆಳಕ್ಕಿಳಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಕೆಳಕ್ಕೆ ಜಿಗಿದರೆ ರಕ್ಷಿಸಲು ಬಲೆ ಸಹಿತ ಅಗ್ನಿಶಾಮಕದಳ ಸಿದ್ಧವಾಗಿತ್ತು. ಆದರೆ ಬಲೆ ಕಟ್ಟದ ಭಾಗದಲ್ಲಿ ನಿಸಾರ್ ಹಾರಿದ್ದಾನೆನ್ನಲಾಗಿದೆ. ಗಂಭೀರ ಗಾಯಗೊಂಡ ಈತನನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲಾಗಲಿಲ್ಲ.