ಮೇರಿ ಮಿಟ್ಟಿ ಮೇರಾ ದೇಶ್ ಕಾಸರಗೋಡು ಬ್ಲಾಕ್ ಮಟ್ಟದ ಅಮೃತಕಲಶ ಯಾತ್ರೆ
ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ ಸಮಾರೋಪ ಅಂಗವಾಗಿ ನಡೆಸುವ ‘ಮೇರಿ ಮಿಟ್ಟಿ ಮೇರಾ ದೇಶ್’ (ನನ್ನ ಮಣ್ಣು, ನನ್ನ ದೇಶ) ಕಾಸರಗೋಡು ಬ್ಲಾಕ್ ಮಟ್ಟದ ಅಮೃತ ಕಲಶ ಯಾತ್ರೆಯನ್ನು ನೆಹರು ಯುವ ಕೇಂದ್ರ ಹಾಗೂ ತಳಂಗರ ಸರಕಾರಿ ಮುಸ್ಲಿಂ ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಆಶ್ರಯದಲ್ಲಿ ನಡೆಸಲಾಯಿತು. ತಳಂಗರೆ ಸರಕಾರಿ ಮುಸ್ಲಿಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಗೆ ಪಂಚಪ್ರಾಣ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಸರಗೋಡು ಬ್ಲಾಕ್‌ನ ವಿವಿಧ ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣನ್ನು ಒಟ್ಟುಗೂಡಿಸಿ ಕಲಶಕ್ಕೆ ಹಾಕಿ ಶಾಲಾ ವಿದ್ಯಾರ್ಥಿಗಳ ಜೊತೆ ಅಮೃತ ಕಲಶ ಯಾತ್ರೆ ನಡೆಸಲಾಯಿತು. ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ಸಂಗ್ರಹಿಸಿದ ಅಮೃತ ಕಲಶವನ್ನು ನೆಹರು ಯುವ ಕೇಂದ್ರ, ಯೂತ್ ವೆಲ್ ಫೇರ್ ಸ್ವಯಂಸೇವಕರು ಅಕ್ಟೋಬರ್ 30, 31 ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಕೊಂಡೊಯ್ಯಲಿದ್ದಾರೆ. ದೇಶದ ವಿವಿಧ ಗ್ರಾಮಗಳ ಮಣ್ಣನ್ನು ಬಳಸಿ ವೀರ ಉದ್ಯಾನವನ್ನು ನಿರ್ಮಿಸಲಾಗುವುದು.