ಮೊಬೈಲ್ ರೀಚಾರ್ಜ್ ಮಾಡಲು ಹಣ ನೀಡದ ತಾಯಿಗೆ ಕಲ್ಲಿನಿಂದ ಹೊಡೆದ ಪುತ್ರ: ನರಹತ್ಯಾ ಯತ್ನ ಪ್ರಕರಣ ದಾಖಲು
ಕಾಸರಗೋಡು: ಮೊಬೈಲ್ ಫೋನ್ ರೀಚಾರ್ಜ್ ಮಾಡಲು ಹಣ ನೀಡದ ದ್ವೇಷದಿಂದ ಪುತ್ರ ತಾಯಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿ ಸಿದ ಬಗ್ಗೆ ದೂರು ಉಂಟಾಗಿದೆ.
ಮಾಯಿಪ್ಪಾಡಿ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿರುವ ವಿಶಾಲಾಕ್ಷಿ (56) ಎಂಬವರ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಇದರಿಂದ ಕಣ್ಣಿಗೆ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಗಾಯಾಳು ವಿಶಾಲಾಕ್ಷಿಯ ಮಗ ದೇವೀಪ್ರಸಾದ್ (35)ನ ವಿರುದ್ಧ ವಿದ್ಯಾನಗರ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೊಬೈಲ್ ರೀಚಾರ್ಜ್ ಮಾಡಲು ಆರೋಪಿ ತಾಯಿಯಲ್ಲಿ ಹಣ ಕೇಳಿದ್ದನೆಂದೂ ಅದನ್ನು ನೀಡದ ದ್ವೇಷದಿಂದ ಆತ ಕಲ್ಲಿನಿಂದ ತಾಯಿಯ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.