ಕಾಸರಗೋಡು; 1200 ಕೋಟಿ ರೂ.ಗಳ ವಂಚನೆ ನಡೆಸಿದ ಪ್ರಕರಣದ ಆರೋಪಿಗಳಲ್ಲೋರ್ವನಾದ ಕುಂಬಳೆ ಬಳಿಯ ನಿವಾಸಿಯನ್ನು ಮಲಪ್ಪುರಂ ಕ್ರೈಮ್‌ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಎಡನಾಡು ನಿವಾಸಿ ಕೆ.ಎಂ. ಅಬ್ದುಲ್ ಕಲಾಂ (47) ಬಂಧಿತ ಆರೋಪಿ. ಈತ ಈ ವಂಚನೆ ಪ್ರಕರಣದ 13ನೇ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೋರಿಸ್ ಕಾಯಿನ್‌ಗಾಗಿ ಈತ ಸುಮಾರು 90 ಕೋಟಿ ರೂ. ತನಕ ಸಂಗ್ರಹಿಸಿ ಇದೇ ಪ್ರಕರಣದ ಒಂದನೇ ಆರೋಪಿ ನಿಶಾದ್ ಎಂಬಾತನ ಬ್ಯಾಂಕ್ ಖಾತೆಗೆ ಕಳುಹಿಸಿ ರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪೂಕೋಟ್ ಪಾಡಂನಲ್ಲಿ 2020ರಲ್ಲಿ ಮೋರಿಸ್ ಕಾಯಿನ್ ಎಂಬ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿ ಠೇವಣಿ ಸಂಗ್ರಹ ಯೋಜನೆ ಆರಂಭಿಸಿ ಅದರ ಹೆಸರಲ್ಲಿ ಈ ವಂಚನಾ ತಂಡ ಹಲವರಿಂದ ಸುಮಾರು 12೦೦೦ ಕೋಟಿ ರೂ. ಠೇವಣಿ ರೂಪದಲ್ಲಿ ಪಡೆದು ಬಳಿಕ ವಂಚನೆ ನಡೆಸಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು 2021ರಲ್ಲಿ ಕ್ರೈಮ್‌ಬ್ರಾಂಚ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಒಂದನೇ ಆರೋಪಿ ನಿಶಾದ್ ವಿದೇಶಕ್ಕೆ ಪಲಾಯನಗೈದು ತಲೆಮರೆಸಿಕೊಂಡು ಜೀವಿಸುತ್ತಿದ್ದಾನೆ.
ಪೂಕೋಟ್ಟು ಪಾಡಂನ್ನು ಕೇಂದ್ರೀಕರಿಸಿ ನಡೆಸಲಾದ ವಂಚನಾ ಜಾಲದವರು ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಮಂದಿಯಿಂದ ಕೋಟಿಗಟ್ಟಲೆ ರೂ. ಪಡೆದು ವಂಚನೆ ನಡೆಸಿದ್ದಾರೆ. ಹೀಗೆ ಹಣ ನಷ್ಟಗೊಂಡವರು ನೀಡಿದ ದೂರಿನಂತೆ ರಾಜ್ಯದ ವಿವಿಧ ಪೊಲೀ ಸ್ ಠಾಣೆಗಳಲ್ಲಿ ಕೇಸುಗಳಿವೆ. ತನಿಖೆ ಅಂಗವಾಗಿ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ. ಮಾತ್ರವಲ್ಲ ಹಲವು ಆರೋಪಿಗಳ ಆಸ್ತಿಗಳು, ವಾಹನ ಇತ್ಯಾದಿಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಕ್ರೈಮ್‌ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ. ಇದರ ತನಿಖೆ ಇನ್ನೂ ಮುಂದುವರಿಯುತ್ತಿದೆ.