ಯುವಕನನ್ನು ಕಾರಿನಲ್ಲಿ ಅಪಹರಿಸಿ ಕೊಲೆಗೆ ಯತ್ನ: ಮುಖ್ಯ ಆರೋಪಿ ಬಂಧನ
ಕುಂಬಳೆ: ಮನೆಯಲ್ಲಿ ನಿದ್ರಿಸುತ್ತಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿಕೊಂಡೊಯ್ದು ಹಲ್ಲೆಗೊಳಿಸಿ ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಉಪ್ಪಳ ಅಂಬಾರು ನಿವಾಸಿ ಇರ್ಶಾದ್ (33) ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಉಪ್ಪಳ ಬಪ್ಪಾಯಿತೊಟ್ಟಿ ಹನಫಿ ಮಸೀದಿ ಬಳಿಯ ಅಮಾನ್ ಮಂಜಿಲ್‌ನ ಮುಹಮ್ಮದ್ ಫಾರೂಕ್ (35)ರನ್ನು ನಾಲ್ಕು ಮಂದಿ ತಂಡ ಅಪಹರಿಸಿ ಹಲ್ಲೆಗೈದು ಗಾಯಗೊಳಿಸಿರುವುದಾಗಿ ಕೇಸು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಈ ಹಿಂದೆ ಕಿರಣ್‌ರಾಜ್ ಶೆಟ್ಟಿ, ಸಹೋದರ ವರುಣ್‌ರಾಜ್ ಶೆಟ್ಟಿ, ರೂಪೇಶ್ ಎಂಬಿವರು ಸೆರೆಗೀಡಾಗಿದ್ದರು.
ಆದರೆ ಇರ್ಶಾದ್ ತಲೆಮರೆಸಿಕೊಂಡಿದ್ದನು. ಕಳೆದ ಎಪ್ರಿಲ್ ೨ರಂದು ಮುಂಜಾನೆ ಇರ್ಶಾದ್ ನೇತೃತ್ವದಲ್ಲಿ ಮುಹಮ್ಮದ್ ಫಾರೂಕ್‌ರನ್ನು ಬಂಬ್ರಾಣ ಬಯಲು ಬಳಿಯ ಮನೆಯೊಂದರ ಸಮೀಪಕ್ಕೆ ಅಪಹರಿಸಿಕೊಂಡೊಯ್ಯಲಾಗಿತ್ತು. ಅಲ್ಲಿ ಕಿರಣ್‌ರಾಜ್ ಶೆಟ್ಟಿ, ಸಹೋದರ ವರುಣ್‌ರಾಜ್ ಶೆಟ್ಟಿ, ರೂಪೇಶ್ ಎಂಬಿವರು ಸೇರಿ ಮುಹಮ್ಮದ್ ಫಾರೂಕ್‌ರಿಗೆ ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದರು. ಈ ವೇಳೆ ಕಾರಿನಲ್ಲಿ ಹೋಗಿದ್ದ ಇರ್ಶಾದ್ ಮರಳಿ ಬಂದು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದಿದ್ದರು. ಇದರಿಂದ ಮುಹಮ್ಮದ್ ಫಾರೂಕ್ ಪ್ರಜ್ಞೆ ತಪ್ಪಿ ಬಿದ್ದಾಗ ಅವರನ್ನು ಕಾರಿಗೆ ಹತ್ತಿಸಿದ ತಂಡ ಬಪ್ಪಾಯಿತೊಟ್ಟಿಯ ಮನೆಗೆ ತಲುಪಿಸಿ ಪರಾರಿಯಾಗಿತ್ತು. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡ ಇರ್ಶಾದ್ ಬೆಂಗಳೂರಿನಲ್ಲಿರುವುದಾಗಿ ಮಾಹಿತಿ ಲಭಿಸಿತ್ತು. ಇದರಂತೆ ಎಸ್.ಐ ವಿ.ಕೆ. ವಿಜಯನ್, ಸಿಪಿಒಗಳಾದ ಚಂದ್ರನ್, ಪ್ರಮೋದ್, ರತೀಶ್ ಎಂಬಿವರ ತಂಡ ಬೆಂಗ ಳೂರಿಗೆ ತೆರಳಿ ಸಂಜಯ್‌ನಗರದಿಂದ ಆರೋಪಿಯನ್ನು ಬಂಧಿಸಿದೆ. ಈ ಹಿಂದೆ ಸೆರೆಯಾದ ಕಿರಣ್‌ರಾಜ್‌ಗೆ ಪೋಕ್ಸೋ ಪ್ರಕರಣದಲ್ಲಿ ಒಂದು ವಾರ ಹಿಂದೆ ನ್ಯಾಯಾಲಯ ಜೀವಾವಧಿ ಹಾಗೂ ೫೦ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿತ್ತು.