ಯುವಕನನ್ನು ಕಾರಿನಲ್ಲಿ ಅಪಹರಣ: ಪೊಲೀಸರು ಬೆನ್ನಟ್ಟಿದಾಗ ಯುವಕ, ಕಾರನ್ನು ಉಪೇಕ್ಷಿಸಿ ತಂಡ ಪರಾರಿ
ಮಂಜೇಶ್ವರ: ಗೆಳೆಯರ ಜೊತೆ ಮಾತನಾಡುತ್ತಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಲಾಗಿದೆ. ಪೊಲೀಸರು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿದ ತಂಡ ಯುವಕನನ್ನು ಹಾಗೂ ಕಾರನ್ನು ಉಪೇಕ್ಷಿಸಿ ಪರಾರಿಯಾಗಿದೆ. ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ, ಕುಂಜತ್ತೂರು ಗೇರುಕಟ್ಟೆಯ ಅಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಸದ್ದಾಂ (32)ನನ್ನು ಅಪಹರಿಸಲಾಗಿದೆ. ನಿನ್ನೆ ರಾತ್ರಿ 8.30ರ ವೇಳೆ ಮಂಜೇಶ್ವರ ಗೋವಿಂದ ಪೈ ಕಾಲೇಜಿಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಇಲ್ಲಿ ಗೆಳೆಯರೊಂದಿಗೆ ಸದ್ದಾಂ ಮಾತನಾಡುತ್ತಾ ನಿಂತಿದ್ದರು. ಈ ಮಧ್ಯೆ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ತಲುಪಿದ ತಂಡವೊಂದು ಮಾತನಾಡಲಿಕ್ಕಿದೆ ಎಂದು ತಿಳಿಸಿ ಸದ್ದಾಂನನ್ನು ಹತ್ತಿರಕ್ಕೆ ಕರೆದಿದ್ದಾರೆನ್ನಲಾಗಿದೆ. ಮಾತನಾಡುತ್ತಿದ್ದ ಮಧ್ಯೆ ವಾಗ್ವಾದವುಂಟಾಗಿ ಸದ್ದಾಂ ಓಡಿಹೋಗಲು ಯತ್ನಿಸಿದ್ದಾನೆನ್ನಲಾಗಿದೆ. ಈ ವೇಳೆ ಅಕ್ರಮಿಗಳು ಯುವಕನನ್ನು ಬೆನ್ನಟ್ಟಿ ಸೆರೆ ಹಿಡಿದು ಕಾರಿನಲ್ಲಿ ಹತ್ತಿಸಿಕೊಂಡು ಹೋಗಿರುವುದಾಗಿ ಸಹೋದರಿ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೇಸು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್‌ರ ನೇತೃತ್ವದಲ್ಲಿ ಕಾರನ್ನು ಬೆನ್ನಟ್ಟಿ ರಾತ್ರಿ 11.30ರ ವೇಳೆ ಅಪಹರಿಸಲು ಉಪಯೋಗಿಸಿದ ಕಾರು ಹಾಗೂ ಸದ್ದಾಂನನ್ನು ವಶಕ್ಕೆ ತೆಗೆದಿದ್ದಾರೆ. ಕಾರು ಹಾಗೂ ಸದ್ದಾಂನನ್ನು ನಾಯಮ್ಮಾರ್‌ಮೂಲೆಯಲ್ಲಿ ತಂಡ ಉಪೇಕ್ಷಿಸಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ.