ಯುವಕನ ಕೊಲೆಗೆ ಯತ್ನಿಸಿದ ಪ್ರಕರಣ : ಆರೋಪಿಗೆ ಸಂರಕ್ಷಣೆ ನೀಡಿದ ಕರ್ನಾಟಕ ನಿವಾಸಿ ಸೆರೆ
ಕಾಸರಗೋಡು: ಯುವಕನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಿಗೆ ಸಂರಕ್ಷಣೆ ಒದಗಿಸಿದುದಕ್ಕೆ ಸಂಬಂಧಿಸಿ ಕರ್ನಾಟಕ ನಿವಾಸಿಯಾದ ಯುವಕನೋರ್ವನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಕಡಬ ಕುಂಡಾಜೆ ಅತೂರು ರಾಮಕುಂಜೆ ನಿವಾಸಿ ಸಮೀರ್ ಸಿ.ಕೆ.(35) ಬಂಧಿತ ಆರೋಪಿ. ಜುಲೈ ೨೪ರಂದು ಚೆರ್ಕಳ ಕೋಳಿಕ್ಕರೆ ಹೌಸ್‌ನ ಮೊಹಮ್ಮದ್ ನವಾಜ್ (32) ಎಂಬಾತನನ್ನು ಚೆರ್ಕಳ ಪೇಟೆಯಲ್ಲಿ ಪೂರ್ವದ್ವೇಷದ ನಿಮಿತ್ತ ಕಾರಿನಲ್ಲಿ ಬಂದ ನಾಲ್ವರ ತಂಡ ಇರಿದು ಗಾಯಗೊಳಿಸಿತ್ತು. ಅದಕ್ಕೆ ಸಂಬಂಧಿಸಿ ಗಾಯಾಳು ನೀಡಿದ ದೂರಿನಂತೆ ಅರ್ಶಾದ್ ಸೇರಿ ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮಧ್ಯೆ ನಿನ್ನೆ ಬಂಧಿತನಾದ ಶಮೀರ್ ಪ್ರಕರಣದ ಆರೋಪಿಗಳಿಗೆ ತಲೆಮರೆಸಿಕೊಂಡು ಜೀವಿಸಲು ಆತನ ಮನೆಯಲ್ಲಿ ಸೌಕರ್ಯ ಹಾಗೂ ಸಹಾಯ ಒದಗಿಸಿದ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಪೊಲೀಸರು ಆತನ ಮನೆಗೆ ನೇರವಾಗಿ ಶೋಧ ನಡೆಸಿದಾಗ ಆರೋಪಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಅವರಿಗೆ ತಲೆಮರೆಸಿ ಕೊಳ್ಳಲು ಸಹಾಯ ಮತ್ತು ಸಂರಕ್ಷಣೆ ಒದಗಿಸಿದುದಕ್ಕೆ ಸಂಬಂಧಿಸಿ ಪೊಲೀಸರು ನಂತರ ಶಮೀರ್‌ನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿಕೊಂಡಿ ದ್ದಾರೆ. ತಲೆಮರೆಸಿಕೊಂಡು ಜೀವಿಸುತ್ತಿರುವ ನಾಲ್ವರು ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ.