ಯುವಕನ ನಿಗೂಢ ಸಾವಿಗೆ ಕಾರಣ ಗಂಟಲಲ್ಲಿ ಆಹಾರ ಸಿಲುಕಿಕೊಂಡಿರುವ ಬಗ್ಗೆ ಶಂಕೆ: ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕವಷ್ಟೇ ಕಾರಣ ಖಾತರಿಪಡಿಸಲು ಸಾಧ್ಯ- ಪೊಲೀಸ್
ಬೋವಿಕ್ಕಾನ: ಮುಳಿಯಾರು ಮೂಲಡ್ಕ ಕಾವುಪಾಡಿಯ ಎಡನೀರು ಅಬ್ದುಲ್ಲ ಎಂಬವರ ಪುತ್ರ ರಾಶೀದ್ (24)ರ ಸಾವಿಗೆ ಕಾರಣ ಆಹಾರ ಗಂಟಲ ಮೂಲಕ ಶ್ವಾಸಕೋಶದಲ್ಲಿ ಸಿಲುಕಿಕೊಂಡ ಪರಿಣಾಮವಾಗಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಶೀದ್‌ರ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತಜ್ಞವೈದ್ಯರಿಂದ ನಿನ್ನೆ ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆಹಾರ ಸೇವಿಸುವ ವೇಳೆ ಅದು ಗಂಟಲ ಮೂಲಕ ಶ್ವಾಸಕೋಶದಲ್ಲಿ ಸಿಲುಕಿಕೊಂಡಿರುವುದು ಸಾವಿಗೆ ಕಾರಣವಾಗಿರಬಹುದೆಂಬ ಪ್ರಾಥಮಿಕ ಮಾಹಿತಿ ಆದರಿಂದ ಲಭಿಸಿದೆ. ಆದರೆ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕವಷ್ಟೇ ಈ ವಿಷಯದಲ್ಲಿ ಯಾವುದನ್ನೂ ಖಾತರಿಪಡಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.
ರಾಶೀದ್‌ರ ಮೃತದೇಹದಲ್ಲಿ ಬಾಹ್ಯವಾಗಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಕುತ್ತಿಗೆಯಲ್ಲಿ ಕೆಲ ವೊಂದು ಕಲೆಗಳು ಪತ್ತೆಯಾಗಿದ್ದರೂ, ಅದು ಸಾವಿಗೆ ಕಾರಣವಲ್ಲವೆಂಬ ಸುಳಿ ವನ್ನು ವೈದ್ಯರು ನೀಡಿದ್ದಾರೆ. ಮೃತದೇಹದ ಆಂತರಿಕ ಅವಯವಗಳನ್ನು ಉನ್ನತ ಮಟ್ಟದ ರಾಸಾಯನಿಕ ಪರೀಕ್ಷೆಗಾಗಿ, ಕಳುಹಿಸಿಕೊಡಲಾಗಿದೆ. ಅದರ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ರಾಶೀದ್‌ರ ಮೃತದೇಹ ದ.11ರಂದು ಸಂಜೆ ಕಾಡಿನಿಂದ ಆವರಿಸಿದ ಹಿತ್ತಿಲ ಮರದ ಬುಡದಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾಲಿನಲ್ಲಿ ರಕ್ತದ ಕಲೆಗಳೂ ಪತ್ತೆಯಾಗಿವೆ.
ಅವರು ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಶೆಡ್‌ನಲ್ಲಿ ಏಕಾಂಗಿ ಯಾಗಿ ವಾಸಿಸುತ್ತಿದ್ದರು. ಮೊನ್ನೆ ಬೆಳಿಗ್ಗೆ ತಾಯಿ ಆಯಿಷಾಬಿ ಆ ಶೆಡ್‌ಗೆ ಚಹಾದೊಂದಿಗೆ ಬಂದಾಗ ಅಲ್ಲಿ ರಾಶೀದ್ ಇರಲಿಲ್ಲ. ಅದರಿಂದ ಶಂಕೆಗೊಂಡ ಅವರು ಮೊಬೈಲ್ ಫೋನ್ ಮೂಲಕ ಸಂಪರ್ಕಿಸ ಲೆತ್ನಿಸಿದರೂ ರಾಶೀದ್‌ರ ಫೋನ್ ಸ್ವಿಚ್‌ಆಫ್‌ಗೊಂಡ ಸ್ಥಿತಿಯಲ್ಲಿತ್ತು. ನಂತರ ಆಯಿಷಾಬಿ ಮತ್ತು ರಾಶೀದ್‌ರ ಸ್ನೇಹಿತ ಅಸ್ಕರ್ ಸೇರಿ ಹುಡುಕಾಡಿದಾಗ ರಾಶೀದ್ ಅಲ್ಲೇ ಪಕ್ಕದ ಮರದ ಬುಡದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಆದೂರು ಪೊಲೀಸರು ಅಲ್ಲಿಗೆ ತಲುಪಿ ಮೃತದೇ ಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರು.
ಬೆಂಗಳೂರಿನಲ್ಲಿ ಸಹೋದರನ ಹೊಟೇಲ್‌ನಲ್ಲಿ ಸಹಾಯಕನಾಗಿ ದುಡಿಯುತ್ತಿದ್ದ ರಾಶೀದ್ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ನಂತರ ಪುನಃ ಬೆಂಗಳೂರಿಗೆ ಮರಳುವ ಸಿದ್ಧತೆಯಲ್ಲಿ ತೊಡಗಿದ್ದ ವೇಳೆಯಲ್ಲೇ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.