ಯುವತಿಗೆ ದೌರ್ಜನ್ಯ ಯತ್ನ ಹೋಟೆಲ್ ಮಾಲಕ ಸೆರೆ
ಹೊಸದುರ್ಗ: ಕಲ್ಲಿಕೋಟೆ ಮುಕ್ಕತ್ತ್ ಎಂಬಲ್ಲಿನ ಹೋಟೆಲ್ ನೌಕರೆಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿ ಹಾಗೂ ಹೋಟೆಲ್ ಮಾಲಕನಾದ ದೇವದಾಸ್ ಸೆರೆಯಾಗಿದ್ದಾನೆ. ತೃಶೂರು ಕುನ್ನಂಕುಳಂನಿಂದ ಈತನನ್ನು ಸೆರೆಹಿಡಿಯಲಾಗಿದೆ. ಇತರ ಇಬ್ಬರು ಆರೋಪಿಗಳು ಹಾಗೂ ಹೋಟೆಲ್ ನೌಕರರಾದ ರಿಯಾಸ್, ಸುರೇಶ್ ನಾಪತ್ತೆಯಾಗಿದ್ದಾರೆ. ಕಳೆದ ಫೆಬ್ರವರಿ ೧ರಂದು ರಾತ್ರಿ ಘಟನೆ ನಡೆದಿದೆ. ಪಯ್ಯನ್ನೂರು ನಿವಾಸಿಯಾದ ೨೪ರ ಹರೆಯದ ಯುವತಿಯನ್ನು ದೇವದಾಸ್ ಹಾಗೂ ಇಬ್ಬರು ನೌಕರರು ಸೇರಿ ದೌರ್ಜನ್ಯಗೈಯ್ಯಲು ಯತ್ನಿಸಿದ್ದರು. ದೇವದಾಸ್‌ನ ಮಾಲಕತ್ವದ ಸಂಕೇತಂ ಎಂಬ ಹೋಟೆಲ್‌ನ ನೌಕರೆಯಾಗಿದ್ದಾಳೆ ಯುವತಿ.
ನೌಕರರು ವಾಸಿಸುವ ಮನೆಗೆ ರಾತ್ರಿ ವೇಳೆ ಅತಿಕ್ರಮಿಸಿ ನುಗ್ಗಿ ದೇವದಾಸ್ ಹಾಗೂ ತಂಡ ದೌರ್ಜನ್ಯಗೈಯ್ಯಲು ಯತ್ನಿಸಿದೆ ಯೆಂದು ಕೇಸು ದಾಖಲಾಗಿದೆ. ಈ ವೇಳೆ ದೌರ್ಜನ್ಯದಿಂದ ಪಾರಾಗಲು ಯುವತಿ ಕಟ್ಟಡದ ಮೇಲಿನಿಂದ ಹೊರಗೆ ಹಾರಿದ್ದಳು. ಇದರಿಂದಾಗಿ ಸೊಂಟದ ಎಲುಬು ಮುರಿದು ಗಂಭೀರ ಸ್ಥಿತಿಯಲ್ಲಿ ಯುವತಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ.