ಯುವತಿಯ ಮೃತದೇಹ ಅಪಾರ್ಟ್‌ಮೆಂಟ್‌ನಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ; ನೇಣಿಗೆ ಶರಣಾದ ಪ್ರಿಯತಮ
ಕಾಸರಗೋಡು: ಯುವತಿಯ ಮೃತದೇಹ ಕ್ವಾರ್ಟರ್ಸ್‌ನೊಳಗೆ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದಾದ ಬೆನ್ನಲ್ಲೇ ಆಕೆಯ ಪ್ರಿಯತಮ ವಸತಿ ಗೃಹದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.
ಚೆಂಗಳ ನೆಲ್ಲಿಕಟ್ಟೆ ನಿವಾಸಿ ಫಾತಿ ಮತ್ ಸುಹರಾ (42) ಎಂಬಾಕೆಯ ಮೃತದೇಹ ಹೊಸದುರ್ಗ ನೋರ್ತ್ ಕೋಟಚ್ಚೇರಿಯ ತುಳುಚ್ಚೇರಿ ರಸ್ತೆಯ ಆವಿಯಿಲ್‌ನ ಅಪಾರ್ಟ್‌ಮೆಂಟ್‌ನ ಕೆಳ ಅಂತಸ್ತಿನ ಕೊಠಡಿಯೊಳಗೆ ನಿನ್ನೆ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಇವರು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹ ಪತ್ತೆಯಾದ ಅಪಾರ್ಟ್‌ಮೆಂಟ್‌ನ ಬಾಗಿಲು ಹೊರಗಡೆಯಿಂದ ಬೀಗ ಜಡಿಯ ಲಾಗಿತ್ತು. ಬಟ್ಟೆಯನ್ನು ಹೊದಿಸಿ ಆ ಕೊಠಡಿಯ ಸೋಫಾದ ಅಡಿಭಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ಅದರ ಸುತ್ತಲೂ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಈ ಯುವತಿ ಜತೆ ಅಲ್ಲಿ ವಾಸಿಸುತ್ತಿದ್ದ ಆಕೆಯ ಪ್ರಿಯತಮನೆಂದು ಹೇಳಲಾ ಗುತ್ತಿರುವ ಯುವಕ ಚೆಂಗಳ ಗ್ರಾಮದ ರಹಮ್ಮತ್ ನಗರದ ಕನಿಯಡ್ಕ ಹೌಸಿನ ಅಸೈನಾರ್ (33) ಮೊನ್ನೆ ಮಧ್ಯಾಹ್ನ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿರುವ ವಸತಿಗೃಹವೊಂದರ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಟಿಪ್ಪರ್ ಲಾರಿ ಚಾಲಕನಾಗಿರುವ ಅಸೈನಾರ್ ಮಾಹಿನ್ ಕುಟ್ಟಿ- ನಫೀಸ ದಂಪತಿ ಪುತ್ರನಾಗಿದ್ದಾನೆ. ಈತನ ಮೃತದೇಹವನ್ನು ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು. ಅದಾದ ಬೆನ್ನಲ್ಲೇ ಆತನ ಪ್ರಿಯತಮೆ ಎನ್ನಲಾದ ಫಾತಿಮತ್ ಸುಹರಾಳ ಮೃತದೇಹ ಅವಿಯಿಲ್ ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಸೈನಾರ್ ಮತ್ತು ಸುಹರಾರನ್ನು ಮೂರು ದಿನಗಳ ಹಿಂದೆ ನೆರೆಮನೆಯ ವರು ಕಂಡಿದ್ದರು. ನಾನು ಮಂಗಳೂರಿಗೆ ಚಿಕಿತ್ಸೆಗಾಗಿ ಹೋಗುವುದಾಗಿ ಸುಹರಾ ಹಲವರಲ್ಲಿ ತಿಳಿಸಿದ್ದರೆನ್ನಲಾಗಿದೆ. ಆ ಬಳಿಕ ಮೂರು ದಿನಗಳ ಹಿಂದೆ ಆ ಅಪಾರ್ಟ್‌ಮೆಂಟ್ ಬೀಗ ಜಡಿದ ಸ್ಥಿತಿಯಲ್ಲಿತ್ತು. ಸುಹರಾರಿಗೆ ಅವರ ಸ್ನೇಹಿತೆ ಹೊಸದುರ್ಗ ರೈಲು ನಿಲ್ದಾಣ ಬಳಿ ನಿವಾಸಿ ಶರ್ಮಿಳಾ ಮೊನ್ನೆ ಫೋನ್ ಕರೆ ಮಾಡಿದ್ದರು. ಆದರೆ ಸುಹರಾರ ಮೊಬೈಲ್ ಫೋನ್ ರಿಸೀವ್ ಮಾಡದಿ ದ್ದುದರಿಂದ ಶರ್ಮಿಳಾ ನಿನ್ನೆ ನೇರವಾಗಿ ಆ ಅಪಾರ್ಟ್‌ಮೆಂಟ್‌ಗೆ ಬಂದು ಕಿಟಿಕಿ ಬಾಗಿಲಿನಿಂದ ನೋಡಿದಾಗ ಸುಹರಾರ ಮೃತದೇಹ ಅದರೊಳಗೆ ಪತ್ತೆಯಾಗಿದೆ. ಆ ಕೊಠಡಿಯ ಪಕ್ಕದ ಕೊಠಡಿಯಲ್ಲಿ ನೇಣು ಬಿಗಿಯಲು ಕುಣಿಕೆ ತಯಾರಿಸಿದ ರೀತಿಯಲ್ಲಿ ಬಟ್ಟೆಯೊಂದು ಪತ್ತೆಯಾಗಿದ್ದು, ಆ ಬಟ್ಟೆಯ ಮೇಲ್ಭಾಗತುಂಡರಿಸಲ್ಪಟ್ಟ ಸ್ಥಿತಿಯಲ್ಲಿತ್ತು. ಇದರಿಂದಾಗಿ ಸಾಯುವ ಮೊದಲು ಫಾತಿಮತ್ ಸುಹರಾ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರೇ?, ಅದನ್ನು ಕಂಡು ನೇಣನ್ನು ಕತ್ತರಿಸಿ ಅಸೈನಾರ್ ಅವರನ್ನು ರಕ್ಷಿಸಲೆತ್ನಿಸಿದ್ದನೇ? ಎಂಬಿತ್ಯಾದಿ ಗೊಂದಲಗಳು ನಮ್ಮನ್ನು ಕಾಡತೊಡಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಫಾತಿಮತ್ ಸುಹರಾರ ಮೃತದೇಹವನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಅದರ ವರದಿ ಲಭಿಸಿದ ಬಳಿಕವಷ್ಟೇ ಫಾತಿಮತ್ ಸುಹರಾರ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ಹೇಳಿದ್ದಾರೆ. ಆ ಬಳಿಕವಷ್ಟೇ ಈ ಪ್ರಕರಣದ ಮುಂದಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.