ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ತನಿಖಾಧಿಕಾರಿಯ ಬದಲಾವಣೆಗೆ ಒತ್ತಾಯ
ಕುಂಬಳೆ: ಯುವಮೋರ್ಛಾ ನೇತಾರ ನಿಗೂಢ ರೀತಿಯಲ್ಲಿ ಸಾವಿಗೀಡಾದ ಬೆನ್ನಲ್ಲೇ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದ ತನಿಖೆ ನಡೆಸುವ ಎಸ್‌ಐಯನ್ನು ಬದಲಾಯಿಸಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಈ ಕುರಿತು ಕ್ರಿಯಾ ಸಮಿತಿ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗೆ ಮನವಿ ಸಲ್ಲಿಸಿದ್ದಾರೆ. ಕ್ರಿಯಾ ಸಮಿತಿ ಚೆಯರ್‌ಮ್ಯಾನ್ ಪ್ರದೀಪ್ ಆರಿಕ್ಕಾಡಿ, ಕನ್ವೀನರ್ ಮೋಹನ ಬಂಬ್ರಾಣ ಎಂಬಿವರು ಇಂದು ಮನವಿ ಸಲ್ಲಿಸಿದ್ದಾರೆ.
ಬಂಬ್ರಾಣ ಕಲ್ಕುಳದ ಕ್ವಾರ್ಟ ರ್ಸ್‌ನಲ್ಲಿ ವಾಸಿಸುತ್ತಿದ್ದ ಯುವ ಮೋರ್ಛಾ ಕುಂಬಳೆ ಮಂಡಲ ಕಮಿಟಿ ಉಪಾಧ್ಯಕ್ಷನಾಗಿದ್ದ ರಾಜೇಶ್ (೨೮) ಕಳೆದ ತಿಂಗಳು ೧೦ರಂದು ನಾಪತ್ತೆಯಾಗಿದ್ದರು. ಬಳಿಕ ಉಳ್ಳಾಲ ಬೆಂಗರೆ ಸಮುದ್ರದಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ರೀತಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆಂದೂ ಆದರೆ ಸಾವಿನಲ್ಲಿ ಸಂಶಯಗಳಿರುವುದಾಗಿ ತಿಳಿಸಿ ಕ್ರಿಯಾ ಸಮಿತಿ ರೂಪೀಕರಿಸಲಾಗಿತ್ತು. ಮಗನ ಸಾವಿನಲ್ಲಿ ನಿಗೂಢತೆಗಳಿರುವುದಾಗಿ ತಿಳಿಸಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದ ರಾಜೇಶ್‌ರ ತಂದೆ ಲೋಕನಾಥ ಬಳಿಕ ಸೋಮೇಶ್ವರ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತನ್ನ ಸಾವಿಗೆ ನಾಲ್ಕು ಮಂದಿ ಕಾರಣಕರ್ತರೆಂದೂ ಅವರು ಶಬ್ದ ಸಂದೇಶವನ್ನು ಸ್ನೇಹಿತರಿಗೆ ಕಳುಹಿಸಿಕೊಟ್ಟಿದ್ದರು. ಲೋಕನಾಥರ ಸಾವಿಗೆ ಸಂಬಂಧಿಸಿ ಪತ್ನಿ ಪ್ರಭಾವತಿ (೪೯), ಪುತ್ರ ಶುಭಂ (೨೫), ಪ್ರಭಾವತಿಯ ಸಹೋದರಿ ಬೇಬಿ ಯಾನೆ ಭಾರತಿ (೩೮), ಆರಿಕ್ಕಾಡಿ ಪಳ್ಳದ ಸಂದೀಪ್ (೩೭) ಎಂಬಿವರ ವಿರುದ್ಧ ಉಳ್ಳಾಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ತನಿಖೆ ನಡೆಸುವ ಅಧಿಕಾರಿ ಆರೋಪಿಗಳಿಗೆ ಅನುಕೂಲ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದಾರೆಂದೂ ಆದ್ದರಿಂದ ಪ್ರಸ್ತುತ ಅಧಿಕಾರಿಯನ್ನು ಬದಲಾಯಿಸಿ ನಿಷ್ಪಕ್ಷ ರೀತಿಯಲ್ಲಿ ಕಾರ್ಯಾಚರಿಸುವ ಅಧಿಕಾರಿಯನ್ನು ನೇಮಿಸಬೇಕೆಂದು ಕ್ರಿಯಾ ಸಮಿತಿ ಬೇಡಿಕೆ ಮುಂದಿರಿಸಿದೆ.