ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಿದ ಸ್ಥಳೀಯ ಸಂಘ-ಸಂಸ್ಥೆಗಳಿಗೆ ಶ್ಲಾಘನೆ: ಅಮ್ಮೇರಿ ರಸ್ತೆ ಸಂಚಾರ ಸಮಸ್ಯೆ ಅಲ್ಪ ಪರಿಹಾರ

ಪೈವಳಿಕೆ: ಚಿಪ್ಪಾರುಪದವು-ಶ್ರೀ ವಿಷ್ಣುಮೂರ್ತಿ ದೇವಸ್ಥಾನ-ಅಮ್ಮೇರಿ ರಸ್ತೆ ಈ ಭಾಗದ ಅಲ್ಲದೆ ಹೊರ ಊರವರಿಗೆ  ಉಪಯುಕ್ತ ರಸ್ತೆಯಾಗಿದ್ದು, ನಾಲ್ಕು ತಿಂಗಳ ಹಿಂದೆ ಮಳೆಗಾಲ ಆರಂಭದಲ್ಲಿ ದೇವಸ್ಥಾನದ ಸಮೀಪದ ಸಂಕದ ಬಳಿ ಗುಡ್ಡ ಜರಿದು ಸಂಪೂರ್ಣ ಸಂಪರ್ಕರಹಿತವಾಗಿತ್ತು. ವಾರ, ತಿಂಗಳುಗಳ ಕಳೆದರೂ ಇದನ್ನು ತೆರವುಗೊಳಿಸದ ಸ್ಥಳೀಯಾಡಳಿತ, ಸ್ಥಳದ ಮಾಲೀಕರ ವಿರುದ್ಧ ಜನರು ಆಕ್ರೋಶ ತೋರಿದ್ದರು. ಈ ಕುರಿತು ಜನರು ಸಹಿ ಸಂಗ್ರಹಿಸಿ ಸ್ಥಳೀಯಾಡಳಿತ,  ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸ್ಥಳೀಯ ಪಂಚಾಯತ್ ಪ್ರತಿನಿಧಿ ತಾತ್ಕಾಲಿಕವಾಗಿ ಜರಿದುಬಿದ್ದ ಮಣ್ಣನ್ನು ತೆರವುಗೊಳಿಸಿದಾಗ ರಸ್ತೆಯಲ್ಲಿ ಸಂಚಾರ ಪುನರಾರಂಭಿಸುತ್ತು.  ಆದರೆ ಮಳೆಗೆ ಮಣ್ಣು ತೆಗೆಯಲು ಆಗುವುದಿಲ್ಲ ಎಂಬ ಕುಂಟು ನೆಪದಿಂದ ಪೂರ್ಣ ಮಣ್ಣು ತೆರವುಗೊಳಿಸಲಿಲ್ಲ. ನಂತರ ಒಂದು ತಿಂಗಳ ಕಾಲ ಬಿಸಿಲು ಕಾದು ಮಣ್ಣು ಒಣಗಿದರೂ ಅದನ್ನು ತೆಗೆಯದ ಕಾರಣ ೧೦ ದಿನ ಹಿಂದೆ ಸುರಿದ ಮಳೆಗೆ ಮಣ್ಣು ಪುನಃ ರಸ್ತೆಗೆ ಜಾರಿ ಸಂಪರ್ಕ ಕಡಿತಗೊಂಡಾಗ ಜನ ದಿನನಿತ್ಯದ ಸಂಚಾರಕ್ಕೂ ಕಷ್ಟಪಡುವಂತಾಯಿತು. ಇದೀಗ ಚಿಪ್ಪಾರಿನ ಜೈ ಹಿಂದ್ ಗೆಳೆಯರ ಬಳಗದ ಕಾರ್ಯಕರ್ತರು, ಓಂ ಶ್ರೀ ಜೇಷ್ಠರಾಜ ಗಣಪತಿ ಭಜನಾ ಮಂದಿರ, ವಿಷ್ಣು ಫ್ರೆಂಡ್ಸ್ ಕ್ಲಬ್‌ನವರ ಸಹಕಾರದೊಂದಿಗೆ ನಿನ್ನೆ ಶ್ರಮದಾನ ನಡೆಸುವ ಮೂಲಕ ರಸ್ತೆಯ ಮಣ್ಣನ್ನು  ಪೂರ್ಣ ತೆಗೆದು ಮಾದರಿ ಕಾರ್ಯ ಮಾಡಿ ಜನರ ಅಭಿನಂದನೆಗೆ ಪಾತ್ರರಾಗಿದ್ದಾರೆ.  ಮಣ್ಣನ್ನು ತೆಗೆಯಲು ಸ್ಥಳೀಯಾಡಳಿ, ಜನಪ್ರತಿನಿಧಿ, ಕಂದಾಯ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡಲೆಂದು ಊರಿನ ಜನ ಬಯಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page