ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಇಬ್ಬರ ಸೆರೆ
ಕಾಸರಗೋಡು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಒಂದೂಮುಕ್ಕಾಲು ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಕೊಂಡೋಡಿ ನಿವಾಸಿ ಜಾಫರ್ ಎ.ಟಿ. (38) ಮತ್ತು ಕಣ್ಣೂರು ಕದಿರೂರು ಪೊಕಾಯಿ ಮುಕ್ ನಿವಾಸಿ ಮುದಾಸಿರ್ (35) ಬಂಧಿತ ಆರೋಪಿಗಳು. ಚಂದೇರ ಪೊಲೀಸರು ಇವರನ್ನು ಬಂಧಿಸಿದ್ದಾರೆ.
2024 ಡಿಸೆಂಬರ್ 7ರಂದು ಪಿಲಿಕ್ಕೋಡ್ ಎಚ್ಚಿಕೋವಲ್ ನಿವಾಸಿಯಾಗಿರುವ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಕುತ್ತಿಗೆಯಿಂದ ಇಬ್ಬರು ಚಿನ್ನದ ಸರ ಎಗರಿಸಿ ಪರಾರಿಯಾಗಿ ದ್ದರು. ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ 300ರಷ್ಟು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಅದರಲ್ಲಿ 50ರಷ್ಟು ಸಿಸಿ ಟಿವಿಯಲ್ಲಿ ಆರೋಪಿಗಳ ದೃಶ್ಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ನಡೆಸಿದ ಮುಂದಿನ ಶೋಧ ಕಾರ್ಯಾಚರಣೆ ಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋತ್‌ರ ಮೇಲ್ನೋಟದಲ್ಲಿ ಚಂದೇರ ಇನ್ಸ್‌ಪೆಕ್ಟರ್ ಪ್ರಶಾಂತ್ ಎಂ, ಎಸ್‌ಐ ಸತೀಶ್ ಕುಮಾರ್, ಎಸ್.ಸಿ ಪಿ.ಒಗಳಾದ ರಂಜಿತ್ ಕುಮಾರ್, ರಂಜಿತ್ ಎಂ, ಸಜಿತ್ ಮತ್ತು ಸಿಪಿಒಗಳಾದ ಸುಧೀಶ್ ಮತ್ತು ಹರೀಶ್ ಎಂಬವರನ್ನೊಳಗೊಂಡ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.