ರಸ್ತೆ ಕುಸಿದ ಸ್ಥಳದಲ್ಲಿ ಹಗ್ಗಕಟ್ಟಿದ ಲೋಕೋಪಯೋಗಿ ಇಲಾಖೆ: ವಾಹನ ಸಂಚಾರಕ್ಕೆ ಭೀತಿ
ಪೈವಳಿಕೆ: ರಸ್ತೆ ಕುಸಿದು ಅಪಾಯ ಸಂಭವಿಸಲು ಸಾಧ್ಯತೆ ಇದೆಯೆಂದು ಅಧಿಕಾರಿಗಳಿಗೆ ತಿಳಿಸಿದಾಗ ಅವರು ತಲುಪಿ ಹಗ್ಗ ಕಟ್ಟಿ ಎಚ್ಚರಿಕೆ ಬೋರ್ಡ್ ಸ್ಥಾಪಿಸಿ ತೆರಳಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ. ಹಗ್ಗ ಕಟ್ಟಿದರೆ ಅಪಾಯ ತಪ್ಪಿಸಬಹುದೇ ಎಂಬ ಚಿಂತೆ ಈಗ ಸ್ಥಳೀಯ ರಲ್ಲಿದ್ದು, ಇದು ರೋಷಕ್ಕೆ ಕಾರಣವಾಗಿದೆ.
ಮುಳಿಗದ್ದೆ-ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಕುಸಿದು ಏಳು ತಿಂಗಳು ಕಳದಿದೆ. ಆದರೂ ದುರಸ್ತಿಯಾಗದೆ ಲೋಕೋಪಯೋಗಿ ಇಲಾಖೆಯ ಈ ರಸ್ತೆಯ ಬಗ್ಗೆ ವಾರ್ಡ್ ಪ್ರತಿನಿಧಿ ಜಯಲಕ್ಷ್ಮಿ ಭಟ್ರ ನೇತೃತ್ವದಲ್ಲಿ ಸ್ಥಳೀಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೂ ದುರಸ್ತಿಗೆ ಕ್ರಮ ಕೈಗೊಳ್ಳದೆ ಸ್ಥಳಕ್ಕೆ ತಲುಪಿದ ಅಧಿಕಾರಿಗಳು ಅಲ್ಲಿ ಹಗ್ಗಕಟ್ಟಿ ಎಚ್ಚರಿಕೆ ಬೋರ್ಡ್ ಸ್ಥಾಪಿಸಿ ತೆರಳಿದ್ದಾರೆ. ಕುಸಿದ ರಸ್ತೆ ಬದಿಯಲ್ಲೇ ವ್ಯಕ್ತಿಯೋರ್ವರ ಕೆರೆ ಇದ್ದು, ವಾಹನ ಸಂಚಾರಕ್ಕೆ ಭೀತಿ ಉಂಟಾಗಿದೆ ಈ ರಸ್ತೆಯ ವಿವಿಧ ಕಡೆ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ರಸ್ತೆ ಶೋಚನೀಯಾವಸ್ಥೆಗೆ ತಲುಪಿದೆ. ಈ ಬಗ್ಗೆ ದೂರ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಸ್ತೆ ದುರಸ್ತಿಗೆ ಕ್ರಮ ಉಂಟಾಗದಿದ್ದರೆ ಜನರನ್ನು ಸೇರಿಸಿ ಪ್ರತಿಭಟಿಸುವುದಾಗಿ ವಾರ್ಡ್ ಪ್ರತಿನಿಧಿ ತಿಳಿಸಿದ್ದಾರೆ.