ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿದ ಕ್ಲಬ್ ಕಾರ್ಯಕರ್ತರು: ಪಂಚಾಯತ್‌ನಿಂದ 5000 ರೂ. ದಂಡ, ತಾಕೀತು

ಕುಂಬಳೆ: ಶುಚಿತ್ವ ಕೇರಳ ನಿರ್ಮಾಣ ಗುರಿಯೊಂದಿಗೆ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರು ವಾಗಲೇ ನಾಡಿನ ವಿವಿಧೆಡೆ ವಿವಿಧ ರೀತಿಯ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯ ಸೃಷ್ಟಿಸುತ್ತಿರುವುದಾಗಿ ಆರೋಪಕೇಳಿಬರುತ್ತಿದೆ.

ಇದೇ ರೀತಿ  ಕುಂಬಳೆ-ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರನಗರ ಹಾಗೂ ಶಾಂತಿಪಳ್ಳ ಮಧ್ಯೆ ದಿನಂಪ್ರತಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಎಸೆಯುತ್ತಿದ್ದವರನ್ನು ನಾಡಿನ ಯುವಕರು  ಪತ್ತೆಹಚ್ಚಿದ್ದಾರೆ. ತ್ಯಾಜ್ಯ ಎಸೆಯುವವ ರನ್ನು ಪತ್ತೆಹಚ್ಚಲು ಭಾಸ್ಕರನಗರ ಕ್ಲಬ್‌ನ ಪದಾಧಿಕಾರಿಗಳು ನಿದ್ದೆಗೆಟ್ಟು ಕಾದು ಕುಳಿತು ಗಮನಿಸುತ್ತಿದ್ದಂತೆ ದಿನಂಪ್ರತಿ ತ್ಯಾಜ್ಯಗಳ ರಾಶಿ ಹೆಚ್ಚುತ್ತಿರುವುದು ಕಂಡುಬಂದಿದೆ. ಇದರಿಂದ  ಸಂಶಯಗೊಂಡ ಕ್ಲಬ್ನ  ಕಾರ್ಯಕರ್ತರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟ ತ್ಯಾಜ್ಯವನ್ನು ತೆರೆದು ನೋಡಿದಾಗ ಅದರಲ್ಲಿ ಬೈಕ್‌ನ ಹೊಗೆ ತಪಾಸಣೆ ನಡೆಸಿದ ರಶೀದಿ ಪತ್ತೆಯಾಗಿತ್ತು. ಅದನ್ನು ಅವರು ಪಂಚಾಯತ್ ಕಚೇರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಇದರಂತೆ ಪಂಚಾಯತ್ ಅಧಿಕಾರಿಗಳು ಆ ರಶೀದಿಯೊಂದಿಗೆ ಆರ್‌ಟಿಒ ಕಚೇರಿಗೆ ತಲುಪಿ ವಿಚಾರಿಸಿದಾಗ  ಬೈಕ್ ಶಾಂತಿಪಳ್ಳದ ರಂಜಿತ್‌ನದ್ದೆಂದು ತಿಳಿದುಬಂತು. ಇದರಂತೆ ರಂಜಿತ್‌ಗೆ 5000 ರೂಪಾಯಿ ದಂಡ ವಿಧಿಸಲಾಯಿತು. ಆ ಮೊತ್ತವನ್ನು ರಂಜಿತ್ ಪಂಚಾಯತ್ ಕಚೇರಿಯಲ್ಲಿ ಪಾವತಿಸಿದರು. ಇನ್ನು ಮುಂದೆ ಇಂತಹ ಪ್ರಕರಣದಲ್ಲಿ ಆರೋಪಿಯಾದಲ್ಲಿ ಯಾವುದೇ ರಿಯಾಯಿತಿಯಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ರಂಜಿತ್‌ಗೆ ತಾಕೀತು ನೀಡಿದ್ದಾರೆ.

ರಸ್ತೆ ಬದಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಲು ಜಾಗ್ರತೆ ವಹಿಸಿದ ಕ್ಲಬ್‌ನ ಕಾರ್ಯಕರ್ತರನ್ನು ನಾಗರಿಕರು ಅಭಿನಂದಿಸಿದ್ದಾರೆ.

You cannot copy contents of this page