ರಸ್ತೆ ಹದಗೆಟ್ಟು ಹತ್ತು ವರ್ಷವಾದರೂ ನವೀಕರಣ ಕೆಲಸ ಇನ್ನೂ ನಡೆದಿಲ್ಲ: ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ನಾಗರಿಕರು
ಮೊಗ್ರಾಲ್ ಪುತ್ತೂರು: ಪಂಚಾಯತ್ ರಸ್ತೆ ಹದಗೆಟ್ಟು ಹತ್ತು ವರ್ಷ ಕಳೆದರೂ ಅದನ್ನು ನವೀಕರಿಸುವ ಗೋಜಿಗೆ ಹೋಗದ ನಿಲುವನ್ನು ಪ್ರತಿಭಟಿಸಿ ಸಾರ್ವಜನಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಜನರು ನಿನ್ನೆ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮೊಗ್ರಾಲ್ ಪುತ್ತೂರು ಪಂಚಾಯತ್ಗೊಳಪಟ್ಟ ಮಯಿಲ್ಪಾರ -ಮಜಲ್ ರಸ್ತೆಯ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಈ ಪ್ರತಿಭಟನೆ ನಡೆಸಲಾಗಿದೆ. ಕಳೆದ ೧೦ ವರ್ಷದಿಂದ ಹದಗೆಟ್ಟ ಈ ರಸ್ತೆಯನ್ನು ನವೀಕರಿಸುವಂತೆ ಹೋರಾಟ ಸಮಿತಿ ನೇತೃತ್ವದಲ್ಲಿ ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಅದರಿಂದ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಕಳೆದ ವಾರ ಇದೇ ಬೇಡಿಕೆ ಮುಂದಿರಿಸಿ ಊರವರು ರಸ್ತೆ ತಡೆ ಚಳವಳಿಯನ್ನೂ ನಡೆಸಿದ್ದರು. ಆಗ ಜನಪ್ರತಿನಿಧಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ೨೫ ದಿನಗಳೊಳಗಾಗಿ ರಸ್ತೆಯನ್ನು ನವೀಕರಿಸುವುದಾಗಿ ಅದರ ಗುತ್ತಿಗೆದಾರರು ತಿಳಿಸಿದ್ದಾರೆ. ಅದಾಗ್ಯೂ ನವೀಕರಣೆ ಕೆಲಸ ಆರಂಭಿಸಲಾಗಿಲ್ಲ. ಅದನ್ನು ಪ್ರತಿಭಟಿಸಿ ನಿನ್ನೆ ಹೋರಾಟ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಬೀಗ ಜಡಿದು ಊರವರು ಮತ್ತೆ ಹೋರಾಟ ನಡೆಸಿದ್ದಾರೆ. ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೀಳಾ ಮಜಲ್, ಕೆ. ವಿಶ್ವನಾಥ, ಅಬ್ದುಲ್ ರಹ್ಮಾನ್, ಕೆ. ಖದೀಜ, ಕೆ.ಎಂ. ಅಬ್ದುಲ್ ರಿಯಾಸ್, ಎಂ. ಗಿರೀಶ್, ಎಂ. ಸೆಲಿನ್, ವಿ. ಗಂಗಾ, ಬಿ. ಮಿನಿ, ಎ. ಶೈಲಜಾ, ಕೆ.ಎನ್. ಶೋ ಭಿತ್, ಇ.ಎಂ. ಜುಬೈಯಾ, ಶೆಮೀಮಾ, ಅಬ್ದುಲ್ ರಹಿಮಾನ್, ಸುಶೀಲ ಎಂಬಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಿರತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು.