ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಮಾವೋವಾದಿಗಳ ಷಡ್ಯಂತ್ರ

ಕಾಸರಗೋಡು: ಛತ್ತೀಸ್‌ಗಡ್ ಸೇರಿದಂತೆ ಉತ್ತರ ಭಾರತದಲ್ಲಿ ನಡೆಸಲಾಗುತ್ತಿರುವ ರೀತಿಯ ಭಾರೀ ವಿಧ್ವಂಸಕ ಕೃತ್ಯಗಳಿಗೆ ಮಾವೋವಾದಿ (ನಕ್ಸಲ್)ಗಳು ಕೇರಳದಲ್ಲೂ ಸಂಚು ಹೂಡಿದ್ದಾರೆ. ರಾಜ್ಯದಲ್ಲಿ ಮಾವೋವಾದಿಗಳ ಪ್ರಧಾನ ಕೇಂದ್ರವಾದ ವಯನಾಡು ಸೇರಿದಂತೆ ಇತರ ಹಲವೆಡೆಗಳಲ್ಲಿ ಮಾವೋವಾದಿಗಳು ಅತ್ಯುಘ್ರ ಪ್ರಹಾರ ಸಾಮರ್ಥ್ಯದ ನೆಲಬಾಂಬ್‌ಗಳನ್ನು ಇರಿಸಿ ಬಾಂಬ್ ಸ್ಫೋಟ   ನಡೆಸುವ  ಭಾರೀ ಸಂಚಿಗೆ ರೂಪು ನೀಡಿರುವುದಾಗಿ ರಾಜ್ಯ ಪೊಲೀಸ್ ಗುಪ್ತಚರ ವಿಭಾಗಕ್ಕೆ  ಸ್ಪಷ್ಟವಾಗಿ ಲಭಿಸಿದೆ.

ಮಾವೋವಾದಿಗಳ ಪ್ರಧಾನ ಚಟುವಟಿಕೆ ಕೇಂದ್ರವಾದ ವಯನಾಡು ತಲಪ್ಪುಳ ಮಕ್ಕಿಮಲೆಯ ಬುಡಕಟ್ಟು ಜನಾಂಗದವರ   ವಾಸಕೇಂದ್ರದಲ್ಲಿ  ಅತ್ಯುಘ್ರ ಸ್ಫೋಟ ಸಾಮರ್ಥ್ಯದ ನೆಲಬಾಂಬ್ ಪತ್ತೆಯಾಗಿದೆ. ಈ ಪ್ರದೇಶ ಅರಣ್ಯ ವಲಯಕ್ಕೆ ಸೇರಿರುವ ಪ್ರದೇಶವಾಗಿದ್ದು ಮಾವೋವಾದಿಗಳೇ ಇಲ್ಲಿ   ನೆಲಬಾಂಬ್ ಬಚ್ಚಿಟ್ಟಿರುವುದಾಗಿ   ಪೊಲೀಸರು ಶಂಕಿಸಿದ್ದಾರೆ. ಮಾವೋವಾದಿಗಳ ಪ್ರಧಾನ ಗುಪ್ತ ಚಟುವಟಿಕೆ ವಲಯವಾಗಿರುವ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹದಳವಾದ ತಂಡರ್ ಬೋಲ್ಟ್  ನಿನ್ನೆಯೂ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದಾಗ ಅರಣ್ಯ ಇಲಾಖೆ ಸ್ಥಾಪಿಸಿರುವ ವಿದ್ಯುತ್ ಬೇಲಿ ಬಳಿಯ ಹೊಂಡವೊಂದರಲ್ಲಿ ಐಇಡಿ (ಇಂಪ್ರೆಸ್ಡ್ ಪ್ರೊವೈಡರ್ಸ್ ಎಕ್ಸ್‌ಪ್ಲೋಸೀವ್ ಡಿವೈಸ್) ಎಂಬ ಹೆಸರಿನ ನೆಲಬಾಂಬ್ ಬಚ್ಚಿಟ್ಟಿರುವುದು ಪತ್ತೆಯಾಗಿದೆ.  ಮಾತ್ರವಲ್ಲ ಅಲ್ಲೇ ಪಕ್ಕ  ಐದು ಡಿಟೋನೇಟರ್‌ಗಳು, ಆರು ಜಿಲಾಟಿನ್ ಸ್ಟಿಕ್‌ಗಳು ಸೇರಿದಂತೆ ಇತರ ಹಲವು ಸ್ಫೋಟಕ ಸಾಮಗ್ರಿಗಳೂ   ಪತ್ತೆಯಾಗಿದೆ.  ಇಂತಹ ಬಾರೀ ಸ್ಫೋಟ ಸಾಮರ್ಥ್ಯ ಹೊಂದಿರುವ ನೆಲಬಾಂಬ್ ಪತ್ತೆಯಾಗಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮವಾಗಿದೆ.

ಛತ್ತೀಸ್‌ಗಡದ ಮಾದರಿಯಲ್ಲಿ ಕೇರಳ ಪೊಲೀಸ್ ಪಡೆಯ ನಕ್ಸಲ್ ನಿಗ್ರಹದಳವಾದ ತಂಡರ್ ಬೋಲ್ಟ್ ತಂಡದವರ  ಮೇಲೆ ಪ್ರಯೋಗಿಸಲು ಅಲ್ಲಿ ಈ ನೆಲಬಾಂಬ್ ಬಚ್ಚಿಡಲಾಗಿದೆಯೆಂಬ ಕಳವಳಕಾರಿ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಆ ಮೂಲಕ ರಾಜ್ಯದ ಇತರೆಡೆಗಳಲ್ಲೂ ಸರಣಿ ಬಾಂಬ್ ಸ್ಫೋಟ ನಡೆಸುವ  ಸಂಚಿಗೂ ಮಾವೋವಾದಿಗಳು ರೂಪು ನೀಡಿದ್ದರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.

ಪತ್ತೆಯಾದ ನೆಲಬಾಂಬನ್ನು ಬಾಂಬ್ ತಜ್ಞರು ಆಗಮಿಸಿ ಅಲ್ಲೇ ನಿಷ್ಕ್ರಿಯಗೊಳಿಸಿದರು. ನೆಲಬಾಂಬ್ ಪತ್ತೆಯಾದ ಸ್ಥಳ ಮಾವೋವಾ ದಿಗಳ ಪಶ್ಚಿಮ ಘಟ್ಟ ಕಬಿನಿ ದಳದ ಪ್ರಧಾನ ಅಡಗುತಾಣವೂ ಆಗಿದೆ. ನೆಲಬಾಂಬ್ ಪತ್ತೆಯಾಗಿರುವ  ಹಿನ್ನೆಲೆಯಲ್ಲಿ ಉತ್ತರ ಕೇರಳದ ಜಿಲ್ಲೆಗಳ ಅರಣ್ಯ ಸನಿಹದ ಪ್ರದೇಶಗಳಲ್ಲ್ಲೂ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page