ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಐಸಿಸ್ ನೇತಾರನ ಸೆರೆ
ಕೊಚ್ಚಿ: ಕೇರಳದಲ್ಲಿ ವಿಧ್ವಂಸಕ ಕೃತ್ಯ ಸಂಚಿಕೆ ಯೋಜನೆ ಹಾಕಿಕೊಂಡಿದ್ದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್)ನ ನೇತಾರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚೆನ್ನೈಯಿಂದ ಬಂಧಿಸಿದೆ. ತೃಶೂರು ತಾವರಡ್ಕ ನಿವಾಸಿ ಸೈಯಿದ್ ನಬೀಲ್ ಅಹಮ್ಮದ್ (೩೦) ಬಂಧಿತನಾದ ಉಗ್ರ.
ತಮಿಳುನಾಡಿನ ಕೊಯಂಬತ್ತೂರನ್ನು ಕೇಂದ್ರೀಕರಿಸಿ ನಬೀಲ್ ಈ ಹಿಂದೆ ಗುಪ್ತವಾಗಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದನು. ಈತ ಐಸಿಸ್‌ನ ತೃಶೂರು ಘಟಕದ (ಮೊಡ್ಯೂಲ್)ನ ಮುಖ್ಯಸ್ಥನಾಗಿ ದ್ದಾನೆಂದು ಎನ್‌ಐಎ ತಿಳಿಸಿದೆ.
ಕೇರಳ ಮಾತ್ರವಲ್ಲ ಕರ್ನಾಟಕ ಮತ್ತು ತಮಿಳು ನಾಡಿನಲ್ಲೂ ಈತ ಹಲವು ವಾರಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದನು. ಬಳಿಕ ನಕಲಿ ದಾಖಲು ಪತ್ರಗಳೊಂದಿಗೆ ಚೆನ್ನೈಯಿಂದ ನೇಪಾಳಕ್ಕೆ ಪರಾರಿಯಾಗಲೆತ್ನಿಸಿದ್ದನು. ಅದರೊಳಗಾಗಿ ಆತನನ್ನು ಎನ್‌ಐಎ ಬಂಧಿಸಿದೆ.
ಐಸಿಸ್‌ಗಾಗಿ ಹಣ ಸಂಗ್ರಹಿಸಲು ಈತ ಎಟಿಎಂ ಇತ್ಯಾದಿ ದರೋಡೆ ನಡೆಸಿ ಅದರಿಂದ ಸಂಗ್ರಹಿಸಲಾಗುವ ಹಣವನ್ನು ಸಿರಿಯಾ ಮತ್ತು ಅಫಘಾನಿಸ್ಥಾನದ ಐಸಿಸ್ ಕೇಂದ್ರಗಳಿಗೆ ಸಾಗಿಸುವ ಯೋಜನೆಯನ್ನು ಹಾಕಿಕೊಂಡಿದ್ದನು. ಸೋಶ್ಯಲ್ ಮೀಡಿಯಾವಾದ ಟೆಲಿಗ್ರಾಂ ಮೂಲಕ ಈತ ತನ್ನ ಕಾರ್ಯಾಚರಣೆ ನಡೆಸುತ್ತಿದ್ದನೆಂದು ಎಸ್‌ಐಎ ತಿಳಿಸಿದೆ.
ನಬೀಲ್‌ನ ತೃಶೂರಿನಲ್ಲಿರುವ ಮನೆ ಮತ್ತು ಪಾಲ್ಘಾಟ್ ನಿವಾಸಿ ರಮೀಸ್‌ನ ಮನೆಗೂ ಎನ್‌ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಅಲ್ಲಿ ಪತ್ತೆಯಾದ ಹಲವು ದಾಖಲು ಪತ್ರಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಎನ್‌ಐಎ ಪರಿಶೀಲಿಸಿದಾಗ ಐಸಿಸ್‌ನೊಂದಿಗೆ ನಬೀಲ್ ಹೊಂದಿರುವ ನಂಟನ್ನು ಪತ್ತೆಹಚ್ಚಿದೆ. ನಬೀಲ್ ಮತ್ತು ರಮೀಸ್ ತಮ್ಮ ಸೋಶ್ಯಲ್ ಮೀಡಿಯಾ ಅಕೌಂಟ್ ಮೂಲಕ ೩೦ ಮಂದಿಯೊಂದಿಗೆ ಸದಾ ಆಶಯ ವಿನಿಮಯ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದ್ದು, ಆ ಹಿನ್ನೆಲೆಯಲ್ಲಿ ಆ ೩೦ ಮಂದಿ ವಿರುದ್ಧವೂ ಎನ್‌ಐಎ ತೀವ್ರ ನಿಗಾ ಇರಿಸಿದೆ.ಬಂಧಿತ ನಬೀರ್‌ನನ್ನು ಎನ್‌ಐಎ ಇಂದು ಕೊಚ್ಚಿಯಲ್ಲಿರುವ ಎನ್‌ಐಎ ನ್ಯಾಯಾಲಯ ಹಾಜರುಪಡಿಸಲಿದೆ. ನಂತರ ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆತನನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಎನ್‌ಐಎ ತೀರ್ಮಾನಿಸಿದೆ. ನಬೀಲ್‌ನ ಸಹಚರ ತೃಶೂರು ಮದಿಕಲತ್ತ್‌ನ ಅಸೀಫ್ (ಅಶ್ರಫ್) ಎಂಬಾತನನ್ನು ಕಳೆದ ಜುಲೈಯಲ್ಲಿ ತಮಿಳುನಾಡಿನ ಸತ್ಯಮಂಗಲ ಅರಣ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎನ್‌ಐಎ ಬಂಧಿಸಿತ್ತು