ರಾಜ್ಯದಾದ್ಯಂತ ನಾಳೆ ಬಸ್ ಸಂಚಾರ ಮೊಟಕು
ಕಾಸರಗೋಡು: ಜೂನ್ ೫ರ ಫೆಡರೇಶನ್ ಅಧ್ಯಕ್ಷ ಕೆ.ಕೆ. ತೋಮಸ್ರ ಉಪವಾಸ ಮುಷ್ಕರಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಸಾರಿಗೆ ಸಚಿವ ನೀಡಿದ ಭರವಸೆಯನ್ನು ಜ್ಯಾರಿಗೊಳಿಸದೆ ಏಕಪಕ್ಷೀಯವಾಗಿ ಬಡವರಿಗೆ ಉಚಿತ ಪ್ರಯಾಣ ಘೋಷಿಸಿದ ಸಾರಿಗೆ ಸಚಿವರ ಕ್ರಮದ ವಿರುದ್ಧ ರಾಜ್ಯ ವ್ಯಾಪಕವಾಗಿ ನಾಳೆ ಬಸ್ ಸಂಚಾರ ಮೊಟಕುಗೊಳಿಸಿ ಸೂಚನಾಮುಷ್ಕರ ನಡೆಸಲು ಬಸ್ ಮಾಲಕರ ಸಂಘ ತೀರ್ಮಾನಿಸಿದೆ. ಜಂಟಿ ಮುಷ್ಕರ ಸಮಿತಿ ಮುಂದಿಟ್ಟ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ನ. ೨೧ರಿಂದ ಅನಿರ್ದಿಷ್ಟಕಾಲಕ್ಕೆ ಬಸ್ ಸಂಚಾರ ನಿಲ್ಲಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸಬೇಕು, ಬಸ್ಗಳಲ್ಲಿ ಕ್ಯಾಮರ, ಸೀಟ್ ಬೆಲ್ಟ್ ಹೊರತುಪಡಿಸಬೇಕು, ೧೪೦ ಕಿ.ಮಿ. ಎಂಬ ದೂರಮಿತಿ ನೋಡದೆ ಎಲ್ಲಾ ಬಸ್ಗಳ ಪರವಾನಗಿ ನವೀಕರಿಸಿ ನೀಡಬೇಕು ಮೊದಲಾದ ಬೇಡಿಕೆ ಒಡ್ಡಲಾಗಿದೆ. ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಕಾರ್ಯದರ್ಶಿ ಟಿ. ಲಕ್ಷ್ಮಣನ್, ರಾಜ್ಯ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಸಿ.ಎ. ಮುಹಮ್ಮದ್ ಕುಂಞಿ, ಪಿ.ಎ. ಮುಹಮ್ಮದ್ ಕುಂಞಿ ಭಾಗವಹಿಸಿದರು.