ರಾತ್ರಿ ವೇಳೆ ಮನೆಗೆ ಬೆಂಕಿ ತಗಲಿ ಮನೆಯವರು ಅದೃಷ್ಟವಶಾತ್ ಅನಾಹುತದಿಂದ ಪಾರು
ಕಾಸರಗೋಡು: ರಾತ್ರಿ ವೇಳೆ ಮನೆಗೆ ಬೆಂಕಿ ತಗಲಿ ಮನೆಯವರು ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ನೆಲ್ಲಿಕುಂಜೆ ಮೊದೀನ್ ಮಸೀದಿ ರಸ್ತೆ ಬಳಿಯ ಎನ್.ಎಂ. ಹೌಸ್‌ನ ಮೊಹಮ್ಮದಲಿ ಎಂಬವರ ಹೆಂಚು ಹಾಸಿದ ಮನೆಯಲ್ಲಿ ಇಂದು ಮಂಜಾನೆ ಸುಮಾರು ೨ ಗಂಟೆಯ ವೇಳೆ ಈ ಬೆಂಕಿ ಅನಾಹುತ ಸಂಭವಿಸಿದೆ. ಮನೆಯಲ್ಲಿ ನಮಾಜ್ ಮಾಡುವ ಕೊಠಡಿಯಲ್ಲಿ ಬೆಂಕಿ ಎದ್ದಿದೆ. ಆಗ ಆ ಕೊಠಡಿಯೊಳಗಿನಿಂದ ಜೋರಾಗಿ ಶಬ್ದ ಉಂಟಾಗಿದೆ. ಶಬ್ದ ಕೇಳಿದ ಮನೆಯವರು ಎಚ್ಚೆತ್ತು ನೋಡಿದಾಗ ಕೊಠಡಿಯೊಳಗೆ ಬೆಂಕಿ ಉರಿಯುತ್ತಿರುವುದನ್ನು ಕಂಡು ತಕ್ಷಣ ಹೊರಕ್ಕೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಬಗ್ಗೆ ನೀಡಿದ ಮಾಹಿತಿಯಂತೆ ಸ್ಟೇಷನ್‌ನ ಆಫೀಸರ್ ಪ್ರಕಾಶನ್, ಎಸ್‌ಎಫ್‌ಆರ್‌ಒ ವೇಣುಗೋಪಾಲ್‌ರ ನೇತೃತ್ವದ ಕಾಸರಗೋಡು ಅಗ್ನಿ ಶಾಮಕ ದಳದವರ ತಂಡ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಬೆಂಕಿ ತಗಲಿದ ಕೊಠಡಿಯೊಳಗಿದ್ದ ಫ್ಯಾನ್, ಅದರ ಪಕ್ಕಾಸು, ಹಾಸಿಗೆ ಮತ್ತಿತರ ಸಾಮಗ್ರಿಗಳು ಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಮನೆ ಗೋಡೆಯೂ ಬಿರುಕು ಬಿಟ್ಟಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಲೆಕ್ಕಹಾಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬಹುದೆಂದು ಶಂಕಿಸಲಾಗುತ್ತಿದೆ.