ರಾತ್ರಿ ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಗಂಭೀರ ಗಾಯಗೊಂಡ ಯುವಕನನ್ನು ರಕ್ಷಿಸಿದ ರೈಲ್ವೇ ಪೊಲೀಸ್
ಕಾಸರಗೋಡು: ರಾತ್ರಿ ವೇಳೆ ಸಂಚರಿಸುತ್ತಿದ್ದ ರೈಲಿನಿಂದ ದಿಢೀರ್ ಆಗಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡು ರೈಲ್ವೇ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.
ದಿಲ್ಲಿಯಿಂದ ಎರ್ನಾಕುಳಂಗೆ ಹೋಗುತ್ತಿದ್ದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲುಗಾಡಿ ಇಂದು ಮುಂಜಾನೆ 1 ಗಂಟೆಗೆ ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಪ್ರಯಾಣ ಮುಂದುವರಿಸುತ್ತಿದ್ದಂತೆಯೇ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಸ್ವದೇಶಿ ಎಂದು ಹೇಳಲಾಗುತ್ತಿರುವ ಸೀತಾರಾಂ (45) ಎಂಬವರು ರೈಲಿನಿಂದ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಆಫೀಸರ್ ಮಹೇಶ್ ಸಿ.ಕೆ., ರೈಲ್ವೇ ಪ್ರೊಟೆಕ್ಷನ್ ಪೋರ್ಸ್ ಕಾನ್‌ಸ್ಟೇಬಲ್‌ಗಳಾದ ಮುನೀರ್ ಖಾನ್ ಮತ್ತು ರಮೇಶ್ ಕುಮಾರ್ ಎಂಬವರು ರಾತ್ರಿ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ರೈಲು ಹಳಿಯಲ್ಲೇ ಸುಮಾರು ಮೂರು ಕಿಲೋ ಮೀಟರ್‌ನಷ್ಟು ಹುಡುಕಾಡುತ್ತಾ ಮುಂದಕ್ಕೆ ಸಾಗಿದಾಗ ಕಳನಾಡ್‌ನಲ್ಲಿ ರೈಲಿನಿಂದ ಬಿದ್ದ ವ್ಯಕ್ತಿಯನ್ನು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಆದರೆ ಅವರನ್ನು ಸಾಗಿಸಲು ಅಲ್ಲಿಗೆ ಆಂಬುಲೆನ್ಸ್ ಆಗಮಿಸಲು ದಾರಿ ಸೌಕರ್ಯವಿಲ್ಲದ ಕಾರಣ ಸಮೀಪದ ಮನೆಯೊಂದರಿಂದ ಬ್ಲಾಂಕೆಟ್ ಪಡೆದು ಅದರಲ್ಲಿ ಗಾಯಾಳುವನ್ನು ಮಲಗಿಸಿ ರಸ್ತೆ ಬದಿ ತಂದ ಬಳಿಕ ಅವರನ್ನು ಆಂಬುಲೆನ್ಸ್‌ನಲ್ಲಿ ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೂ, ನಂತರ ಉನ್ನತ ಮಟ್ಟದ ಚಿಕಿತ್ಸೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಸಾಗಿಸಲಾಯಿತು. ಇವರಿಗೆ ಅಗತ್ಯದ ಸೌಕರ್ಯವನ್ನು ರೈಲ್ವೇ ಪೊಲೀಸ್ ಮತ್ತು ಆರ್‌ಪಿಎಫ್ ಒದಗಿಸಿಕೊಟ್ಟಿದೆ.