ರಾವಡ ಚಂದ್ರಶೇಖರ್ ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕ

ತಿರುವನಂತಪುರ: ದೀರ್ಘಕಾ ಲದ ಪೊಲೀಸ್ ಸೇವೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶೇಖ್ ದರ್ವೇಶ್ ಸಾಹಿಬ್ ಇಂದು ನಿವೃತ್ತರಾಗುವರು. ಆದ್ದರಿಂದ  ಆ ಸ್ಥಾನಕ್ಕೆ ಯಾರನ್ನು ಆರಿಸಲಾಗುವುದೆಂಬ ವಿಷಯದಲ್ಲಿ ವಾರಗಳಿಂದ ಉಂಟಾಗಿದ್ದ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ.

ಹಿರಿಯ ಐಪಿಎಸ್ ಅಧಿಕಾರಿ  ಐಬಿಯ ಸ್ಪೆಷಲ್ ಡೈರೆಕ್ಟರ್ ಆಗಿ  ಸೇವೆ ಸಲ್ಲಿಸುತ್ತಿರುವ  ರಾವಡ ಚಂದ್ರಶೇಖರ್‌ರನ್ನು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ಇಂದು ಬೆಳಿಗ್ಗೆ ಸೇರಿದ ರಾಜ್ಯ ಸಚಿವಸಂಪುಟ ಸಭೆ ತೀರ್ಮಾನಿಸಿದೆ. ಇನ್ನೋರ್ವ ಹಿರಿಯ ಐಪಿಎಸ್ ಅಧಿಕಾರಿ ಈಗ ರಾಜ್ಯ ರಸ್ತೆ ಸುರಕ್ಷಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಿತಿನ್ ಅಗರ್‌ವಾಲ್‌ರನ್ನು ಅಥವಾ ರಾವಡ ಚಂದ್ರಶೇಖರ್‌ರ ಹೆಸರು ಹೊಸ ಡಿಜಿಪಿ ಸ್ಥಾನಕ್ಕೆ ಕೇಳಿಬಂದಿತ್ತು. ಇದರಲ್ಲಿ ಯಾರಿಗೆ ಡಿಜಿಪಿ ಸ್ಥಾನ ಲಭಿಸಬಹು ದೆಂಬ ವಿಷಯದಲ್ಲಿ ಕಳೆದ ಹಲವು ದಿನಗಳಿಂದ ಪೊಲೀಸ್ ವಲಯದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ರಾವಡ ಚಂದ್ರಶೇಖರ್‌ರನ್ನು ಆ ಸ್ಥಾನಕ್ಕೆ ಸರಕಾರ ನೇಮಿಸುವ ಮೂಲಕ ಗೊಂದಲಕ್ಕೆ ತೆರೆಬಿದ್ದಿದೆ.  1991 ರ ಕೇರಳ ಕೇಡರ್ ಐಪಿಎಸ್  ಅಧಿಕಾರಿಯಾಗಿರುವ ರಾವಡ ಚಂದ್ರಶೇಖರ್ ಮೊದಲು ತಲಶ್ಶೇರಿಯಲ್ಲಿ ಎಎಸ್‌ಪಿಯಾಗಿ  ಪೊಲೀಸ್ ವೃತ್ತಿಗೆ ಕಾಲಿರಿಸಿದ್ದರು. ಅವರು ಎಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡ ೪೮ ತಾಸುಗಳಲ್ಲಿ ಕೂತುಪರಂಬದಲ್ಲಿ ಗುಂಡು ಹಾರಾಟ ಘಟನೆ ನಡೆದಿತ್ತು. ಅದರ ಹೆಸರಲ್ಲಿ ಅವರ ವಿರುದ್ಧ ಆರೋಪವುಂಟಾಗಿದ್ದು ಅದರಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತುಗೊಂಡಿದ್ದರೂ  2012ರಲ್ಲಿ ಅವರನ್ನು ಆರೋಪಮುಕ್ತಗೊಳಿಸ ಲಾಗಿತ್ತು. ಪತ್ತನಂತಿಟ್ಟ ಎಎಸ್‌ಪಿ, ಪಾಲಕ್ಕಾಡ್ ಕ್ರೈಂ ಬ್ರಾಂಚ್ ಎಸ್‌ಪಿ, ತಿರುವನಂತಪುರ ಪೊಲೀಸ್ ಕಮಿಶನರ್ ಆಗಿ ಈ ಹಿಂದೆ ಸೇವೆ ಸಲ್ಲಿಸಿದ ಬಳಿಕ ಡೆಪ್ಯುಟೇಶನ್‌ನಲ್ಲಿ ಕೇಂದ್ರ ಸರಕಾರ ಸೇವೆಗೆ ಸೇರ್ಪಡೆಗೊಂಡಿದ್ದರು.  ಆಂಧ್ರಪ್ರದೇಶದ ವೆಸ್ಟ್  ಗೋದಾವರಿ ನಿವಾಸಿಯಾದ ಇವರು ಕೇರಳ ಪೊಲೀಸ್ ಪಡೆಯ 41ನೇ ಡಿಜಿಪಿಯಾಗಲಿದ್ದಾರೆ.

You cannot copy contents of this page