ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅಪಘಾತ: ಚಾಲಕ ಮೃತ್ಯು: ೫೦ಕ್ಕೂ ಹೆಚ್ಚು ಮಂದಿ ಗಾಯ
ಕಾಸರಗೋಡು: ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಬಸ್ಸಿನಲ್ಲಿದ್ದ ೫೦ಕ್ಕೂ ಹೆಚ್ಚು ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪೆರಿಯಾ ರಾಷ್ಟ್ರೀಯ ಹೆದ್ದಾರಿಯಲ್ಲ್ಲಿ ನಿನ್ನೆ ಅಪರಾಹ್ನ ಈ ಅಪಘಾತ ನಡೆದಿದೆ.
ಮಧೂರು ಮನ್ನಿಪ್ಪಾಡಿ ನಿವಾಸಿ ಎಸ್.ಕೆ. ಚೇತನ್ ಕುಮಾರ್ (ಸುಜಿತ್ ೩೭) ಸಾವನ್ನಪ್ಪಿದ ದುರ್ದೈವಿ. ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಿನ್ನೆ ಅಪಘಾತಕ್ಕೀಡಾ ಗಿದೆ. ಪೆರಿಯ ಸಮೀಪದ ಚಾಲಿಂಗಾಲ್ ಮೊಟ್ಟ ರಾಷ್ಟ್ರೀಯ ಹೆದ್ದಾರಿಯ ಮೂಲಕ ಈ ಬಸ್ ಕಣ್ಣೂರಿನತ್ತ ಸಾಗುತ್ತಿದ್ದ ವೇಳೆ ದಿಢೀರ್ ಅದರ ಆಕ್ಸಿಲ್ ತುಂಡಾಗಿ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಚೇತನ್ ಕುಮಾರ್ರನ್ನು ಊರವರು ಸೇರಿ ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.ಅಪಘಾತಕ್ಕೀಡಾದ ಬಸ್ಸಿನ ಗಾಜು ಪುಡಿಗೈದು ಅದರೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಊರವರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ಸಿನಲ್ಲಿ ೫೪ರಷ್ಟು ಪ್ರಯಾಣಿಕರಿದ್ದರು. ಅವರೆಲ್ಲರೂ ಗಾಯಗೊಂಡಿದ್ದಾರೆ. ಗಂಭೀರಗಾಯಗೊಂಡ ಬಸ್ ಕಂಡಕ್ಟರ್ ಶಶಿಧರನ್ ರನ್ನು ಕಣ್ಣೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ. ೪೫ ಮಂದಿಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಂಭೀರಗಾಯಗೊಂಡ ಜಯಶ್ರೀ ಉದಯನಗರ್ ಮತ್ತು ಅಬ್ದುಲ್ ರಹ್ಮಾನ್ ಇಟ್ಟುಮ್ಮಲ್ ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರು ಮಂದಿಯನ್ನು ಹೊಸ ದುರ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ?ಉಳಿಯತ್ತಡ್ಕದ ಟೆಂಪೋ ಚಾಲಕ ಶಶಿಧರನ್-ಕುಸುಮಾವತಿ ದಂಪತಿ ಪುತ್ರನಾಗಿರುವ ಚೇತನ್ ಕುಮಾರ್, ಸಹೋದರ-ಸಹೋದರಿಯರಾದ ಸುನಿಲ್ ಕುಮಾರ್, ಆಶಾ, ನಿಷಾ, ಶೈಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೊಳಪಡಿ ಸಲಾಯಿತು. ಚೇತನ್ ಕುಮಾರ್ರ ದಿಢೀರ್ ಅಗಲುವಿಕೆ ಇಡೀ ಊರನ್ನೇ ತೀವ್ರ ಶೋಕಸಾಗರದಲ್ಲಿ ಮುಳುಗಿಸುವಂತೆ ಮಾಡಿದೆ.