ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯ ಭೀತಿ ಎದುರಿಸುವಂತಾಗಿದೆ. ದಿನವೂ ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ದನ ಸಾಕುವವರು ದನಗಳನ್ನು ಮೇಯಲು ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿ ಇವು ನೇರವಾಗಿ ಹೆದ್ದಾರಿಗೆ ಬರುತ್ತಿವೆ. ರಸ್ತೆ ಬದಿಯಲ್ಲಿ ಇನ್ನೂ ದೀಪ ಸ್ಥಾಪಿಸದೇ ಇರುವ ಹಿನ್ನೆಲೆಯಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನ ಸವಾರರು ದನಗಳನ್ನು ಹತ್ತಿರದಿಂದ ಕಾಣುವಾಗ ಬ್ರೇಕ್ ಹಾಕುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಅಪಘಾತಗಳಿಗೂ ಕಾರಣವಾಗುತ್ತಿದೆ.
ಅಲೆಮಾರಿ ದನಗಳು ರಸ್ತೆಯಲ್ಲಿ ಇದ್ದರೆ, ವಾಹನಚಾಲಕರಿಗೆ ಸಮಯ ನಷ್ಟದ ಜೊತೆಯಾಗಿ ಮಾನಸಿಕ ಒತ್ತಡ ಕೂಡಾ ಹೆಚ್ಚಾಗುತ್ತಿದೆ. ಸಂಬAಧಿತ ಅಧಿಕಾರಿಗಳಿಗೆ ಸಮಸ್ಯೆಯ ಅರಿವು ಇದ್ದರೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಅಲೆಮಾರಿ ದನಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ಜೊತೆಗೆ ದನ ಮಾಲೀಕರಿಗೆ ಎಚ್ಚರಿಕೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯನ್ನು ಸ್ಥಳೀಯಾಡಳಿತ ಮಾಡಬೇಕಾಗಿದೆ.
