ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಳೆದುಕೊಳ್ಳುವ ಕುಂಬಳೆ ಪೇಟೆ: ಕ್ರಿಯಾ ಸಮಿತಿಯಿಂದ ಮುಖ್ಯಮಂತ್ರಿಗೆ ಮನವಿ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕುಂಬಳೆ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಗೆ ನೇರವಾಗಿ ಮನವಿ ಸಲ್ಲಿಸಿದರು. ಕ್ರಿಯಾಸಮಿತಿ ಪದಾಧಿಕಾರಿಗಳಾದ ಶಾಸಕ ಎಕೆಎಂ ಅಶ್ರಫ್, ಲೀಗ್ ನೇತಾರ ಎ.ಕೆ. ಆರಿಫ್, ಕಾಂಗ್ರೆಸ್‌ನ ಮಂಜುನಾಥ ಆಳ್ವ, ಸಿಪಿಎಂನ ಸಿ.ಎ. ಸುಬೈರ್ ಎಂಬಿವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ ಸಮಸ್ಯೆಗಳ ಕುರಿತು ವಿವರಿಸಿದರು.
ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆ ಪೂರ್ಣವಾಗಿ ಬೇರ್ಪಡುವ ಸ್ಥಿತಿಯಲ್ಲಿದೆ. ಈಗಿನ ವ್ಯವಸ್ಥೆ ಪ್ರಕಾರ ಕಾಸರಗೋಡು ಭಾಗದಿಂದ ಕುಂಬಳೆ ಪೇಟೆಗೆ ತೆರಳಬೇಕಾದರೆ ಆರಿಕ್ಕಾಡಿವರೆಗೆ ಸಂಚರಿಸಿ ಅಂಡರ್ ಪ್ಯಾಸೇಜ್ ಮೂಲಕ ಹಿಂತಿರುಗಿ ಬರಬೇಕಾಗಿದೆ. ಅದೇ ರೀತಿ ಕುಂಬಳೆಯಿಂದ ಉಪ್ಪಳ ಭಾಗಕ್ಕೆ ತೆರಳುವವರು ಕುಂಬಳೆ ರೈಲ್ವೇ ನಿಲ್ದಾಣವರೆಗೆ ಸಾಗಿ ಅಂಡರ್ ಪ್ಯಾಸೇಜ್ ಮೂಲಕ ಪ್ರಯಾಣ ಮುಂದುವರಿಸಬೇಕಾಗಿದೆ. ಕಾಸರಗೋಡು ಭಾಗದಿಂದ ಕುಂಬಳೆ ಪೇಟೆಗೆ ತೆರಳುವವರು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬರಲಿದೆ. ಆರಾಧನಾಲಯಗಳು, ಹಲವು ಶಿಕ್ಷಣ ಸಂಸ್ಥೆಗಳು, ಚಿಕಿತ್ಸಾಲಯಗಳು, ಸರಕಾರಿ-ಖಾಸಗಿ ಕಚೇರಿಗಳು ಇರುವ ಕುಂಬಳೆ ಪೇಟೆಗೆ ದಿನನಿತ್ಯ ಸಾವಿರಾರು ಮಂದಿ ಕಾಸರಗೋಡು ಭಾಗದಿಂದ ತೆರಳುತ್ತಾರೆ. ಅವರು ಸುತ್ತುಬಳಸಿ ಕುಂಬಳೆ ಪೇಟೆಗೆ ತಲುಪಬೇಕಾದ ಸ್ಥಿತಿ ಉಂಟಾಗಿದೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಮನವಿಯಲ್ಲಿ ಆಗ್ರಹಪಡಲಾಗಿದೆ. ಸಮಸ್ಯೆಗೆ ಸೂಕ್ತ ಪರಿಹಾರ ಕಾಣುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.