ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಯ ಸುಪರ್‌ವೈಸರ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ಜಿಲ್ಲೆಯ ಹಲವೆಡೆಗಳಲ್ಲಿ ಲೋಪದೋಷಗಳು ಪತ್ತೆಯಾಗಿ ಆ ಬಗ್ಗೆ ತನಿಖೆ ನಡೆಸುತ್ತಿರುವ ವೇಳೆಯಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಯ ಸುಪರ್‌ವೈಸರ್ ತಮ್ಮ ವಾಸಸ್ಥಳದಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಆಂಧ್ರಪ್ರದೇಶದ ವಾಳಿಯಾನಗರ ಜಿಲ್ಲೆಯ ಕೋನಾ ಗ್ರಾಮದ ನಿವಾಸಿ ಗೋವರ್ಧನ್ ರಾವ್ (30) ಸಾವನ್ನಪ್ಪಿದ ವ್ಯಕ್ತಿ. ಇವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಎರಡು ಮತ್ತು ಮೂರನೇ ರೀಚ್‌ನ ನಿರ್ಮಾಣ ಕೆಲಸದ ಗುತ್ತಿಗೆ ವಹಿಸಿಕೊಂಡಿರುವ ಮೆಗಾ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಯ ಸುಪರ್‌ವೈಸರ್ ಆಗಿದ್ದಾರೆ. ಇವರು ಒಂದು ತಿಂಗಳ ಹಿಂದೆ ಕಾಸರಗೋಡಿಗೆ ಆಗಮಿಸಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ನಿರ್ಮಾಣ ಕೆಲಸದ ಮೇಲ್ನೋಟ ವಹಿಸುವ ಹೊಣೆಗಾರಿಕೆಯನ್ನು ಇವರಿಗೆ ವಹಿಸಿಕೊಡಲಾಗಿತ್ತು. ಇವರು ಪೆರಿಯಾಟಡ್ಕದ ಖಾಸಗಿ ಕಟ್ಟಡವೊಂದರಲ್ಲಿ ಬಾಡಿಗೆಗೆ ಕೊಠಡಿಯನ್ನು ಪಡೆದು ಇತರ ಇಬ್ಬರು ಕಾರ್ಮಿಕರೊಂದಿಗೆ ವಾಸಿಸುತ್ತಿದ್ದರು. ಈ ಪೈಕಿ ಓರ್ವ ಕಾರ್ಮಿಕ ಮೊನ್ನೆ ರಜೆಯಲ್ಲಿ ಊರಿಗೆ ತೆರಳಿದ್ದರು. ಇನ್ನೋರ್ವ ಕಾರ್ಮಿಕ ನಿನ್ನೆ ಬೆಳಿಗ್ಗೆ ನಿರ್ಮಾಣ ಕೆಲಸಕ್ಕೆ ಹೋಗಿದ್ದರು. ಆದರೆ ಸಂಜೆಯಾದರೂ ಗೋವರ್ಧನ ರಾವ್ ಕೆಲಸಕ್ಕೆ ಬಾರದೇ ಇರುವುದರಿಂದ ಶಂಕೆಗೊಂಡ ಆ ಕಾರ್ಮಿಕ ಫೋನ್‌ನಲ್ಲಿ ಗೋವರ್ಧನರನ್ನು ಸಂಪರ್ಕಿಸಿದರೂ ಅದಕ್ಕೆ ಪ್ರತಿಕ್ರಿಯೆ ಲಭಿಸಿರಲಿಲ್ಲ. ಇದರಿಂದ ಶಂಕೆಗೊಂಡು ಆ ಕಾರ್ಮಿಕ ತಕ್ಷಣ ಕೊಠಡಿಗೆ ಬಂದು ನೋಡಿದಾಗ ಒಳಗಿನಿಂದ ಲಾಕ್ ಮಾಡಿದ ಸ್ಥಿತಿಯಲ್ಲಿತ್ತು. ಇದರಿಂದ ಶಂಕೆಗೊಂಡ ಅವರು ಕಿಟಿಕಿ ಬಾಗಿಲು ತೆರೆದು ನೋಡಿದಾಗ ಕೊಠಡಿಯೊಳಗಿನ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಗೋವರ್ಧನ್ ಪತ್ತೆಯಾದರು.
ವಿಷಯ ತಿಳಿದ ಬೇಕಲ ಪೊಲೀಸರು ಸ್ಥಳಕ್ಕಾಗಮಿಸಿ ಶವಮಹಜರು ನಡೆಸಿದ ನಂತರ ಮೃತದೇಹವನ್ನು ಕಾಞಂಗಾಡ್‌ನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಗೋವರ್ಧನರ ಮನೆಯವರು ಊರಿನಿಂದ ಕಾಸರಗೋಡಿಗೆ ಪ್ರಯಾಣ ಆರಂಭಿಸಿದ್ದು, ಅವರು ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.