ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ತಲೆಮರೆಸಿಕೊಂಡ ನಾಲ್ವರಿಗಾಗಿ ಶೋಧ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬವರನ್ನು ಕೊಲೆ ನಡೆಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡ ಇತರ ನಾಲ್ಕು ಮಂದಿ ಆರೋ ಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಆತನ ಪ್ರಿಯತಮೆ ಪವಿತ್ರಾ ಗೌಡ, ಈ ಇಬ್ಬರ ಆಪ್ತರು, ಸ್ನೇಹಿತರು ಸಹಿತ 13 ಮಂದಿ ಸೆರೆಗೀಡಾಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಿರುವುದಾಗಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಬಂಧಿಸಲಾದ ದರ್ಶನ್ ಸಹಿತ ಎಲ್ಲಾ ಆರೋಪಿ ಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಔಷಧಿ ಅಂಗಡಿಯ ನೌಕರನಾಗಿದ್ದ ರೇಣುಕಾ ಸ್ವಾಮಿಯನ್ನು ಆರೋಪಿ ಗಳು ಉಪಾಯದಿಂದ ಬೆಂಗಳೂರಿಗೆ ತಲುಪಿಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆಂದು ಹೇಳಲಾಗುತ್ತಿದೆ. ಜೂನ್ ೮ರಂದು ಈ ಘಟನೆ ನಡೆದಿತ್ತು. ಬಳಿಕ ಮೃತದೇಹವನ್ನು ಕಾಮಾಕ್ಷಿ ಪಾಳ್ಯದ ಮೋರಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.
9ರಂದು ಮೃತದೇಹ ಪತ್ತೆಯಾಗಿತ್ತು. ಕೂಡಲೇ ತನಿಖೆ ಆರಂಭಿಸಿದ ಪೊಲೀಸರು 10ರಂದು ನಾಲ್ಕು ಮಂದಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅವರನ್ನು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಂತೆ ದರ್ಶನ್, ಪವಿತ್ರಾ ಗೌಡ ಸಹಿತ ಇತರ ಆರೋಪಿಗಳ ಕುರಿತು ಮಾಹಿತಿ ಲಭಿಸಿದೆ.
ಪವಿತ್ರಾ ಗೌಡಳಿಗೆ ರೇಣುಕಾ ಸ್ವಾಮಿ ಅಸಭ್ಯ ಸಂದೇಶ ಕಳುಹಿ ಸಿರುವುದು ಹಾಗೂ ದರ್ಶನ್‌ನಿಂದ ದೂರವುಳಿಯುವಂತೆ ತಿಳಿಸಿರುವುದೇ ದ್ವೇಷ ಹುಟ್ಟಿಕೊಳ್ಳಲು ಹಾಗೂ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಆರೋಪಿಗಳ ತನಿಖೆ ಮುಂದುವರಿಯುತ್ತಿದೆ ಎಂದು ತಿಳಿದು ಬಂದಿದೆ.