ರೈಲಿನಲ್ಲಿ ಕಾಲೇಜು ಪ್ರಾಧ್ಯಾಪಕರ ಮೇಲೆ ಹಲ್ಲೆ ಇಬ್ಬರು ವಿದ್ಯಾರ್ಥಿಗಳು ಸೆರೆ
ಕಾಸರಗೋಡು: ಕಳೆದ ತಿಂಗಳ 28ರಂದು ಸಂಜೆ ಮಂಗಳೂರಿನಿಂದ ಕಣ್ಣೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂ ಜರ್ ರೈಲಿನಲ್ಲಿ ಪ್ರಯಾಣಿಸು ತ್ತಿದ್ದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಬಳಿಯ ನಿವಾಸಿ ಕೆ. ಸಾಜನ್ (48)ರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ ಇಬ್ಬರು ವಿದ್ಯಾರ್ಥಿಗಳನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಎಂ.ಕೆ. ಪ್ರಕಾಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಪಾಲಕುನ್ನು ತಿರುವಕ್ಕೋಳಿ ಹೌಸ್‌ನ ಪಿ.ಎ. ಮೊಹಮ್ಮದ್ ಜಸಿ (20) ಮತ್ತು ಚೇಟುಕುಂಡು ಕೀಕಾನ ಸಿಬಿ ಹೌಸ್‌ನ ಮೊಹಮ್ಮದ್ ರಸಿಂ ಅಲಿ (20) ಬಂಧಿತ ಆರೋಪಿಗಳು.
ವಿದ್ಯಾರ್ಥಿಗಳು ರೈಲಿನೊಳಗೆ ಆಡುತ್ತಿದ್ದಾಗ ಅದರಲ್ಲಿ ಓರ್ವ ವಿದ್ಯಾರ್ಥಿ ಅನಗತ್ಯವಾಗಿ ಆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಾಧ್ಯಾಪಕ ಸಾಜನ್‌ರ ಹೆಗಲ ಮೇಲೆ ಕೈ ಹಾಕಿದನೆಂದೂ, ಅದನ್ನು ಪ್ರಾಧ್ಯಾಪಕರು ಪ್ರಶ್ನಿಸಿದ ದ್ವೇಷದಿಂದ ಅವರನ್ನು ವಿದ್ಯಾರ್ಥಿಗಳು ರೈಲಿನೊಳಗೂ ನಂತರ ರೈಲು ನಿಲ್ದಾಣದಲ್ಲೂ ಹಲ್ಲೆ ನಡೆಸಿದರೆಂದು ಆರೋಪಿಸಿ ಪ್ರಾಧ್ಯಾಪಕರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕೇಸು ದಾಖಲಿಸಿ ಅದಕ್ಕೆ ಸಂಬಂಧಿಸಿ ಈ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಾದವರು ಮಂಗಳೂರಿನ ಖಾಸಗಿ ಕಾಲೇಜುಗಳ ಬಿಸಿಎ ವಿದ್ಯಾರ್ಥಿಗಳಾಗಿದ್ದಾರೆ.